ಲೋಕಸಭೆ ಚುನಾವಣೆಯ ವೇಳೆ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರತಿಪಕ್ಷಗಳು ಚಕಾರ ಎತ್ತಿದ್ದವು. ಆದರೆ ಚುನಾವಣೆ ನಂತರ ಈ ತಕರಾರುಗಳು ತಣ್ಣಗಾಗಿದ್ದವು. ಈಗ ಎಕ್ಸ್ ಸಾಮಾಜಿಕ ಜಾಲತಾಣ ಮತ್ತು ಟೆಸ್ಲಾ ಕಾರು ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ,“ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ. ಈ ಹಿಂದೆ ಜಾರಿಯಲ್ಲಿದ್ದ ಬ್ಯಾಲೆಟ್ ಪೇಪರ್ ಸೂಕ್ತ” ಎಂದು ಹೇಳಿರುವುದು ಈ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ೧೯೯೮ ರಲ್ಲಿ ಪ್ರಾಯೋಗಿಕವಾಗಿ ಇವಿಎಂಗಳ ಬಳಕೆ ಆರಂಭಿಸಲಾಗಿತ್ತು. ಇವಿಎಂ ಜಾರಿಗೆ ಬಂದ ದಿನದಿಂದಲೂ ಫಲಿತಾಂಶ ಏರುಪೇರು ಸಾಧ್ಯತೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸಲಾಗಿತ್ತು. ಎರಡೂವರೆ ದಶಕಗಳ ಬಳಿಕವೂ ಈ ಅಪಸ್ವರ ಗಳು ನಿಂತಿಲ್ಲ. ಅಂದಿನಿಂದ ಇಂದಿನವರೆಗೂ ಇವಿಎಂಗಳ ಕಾರ‍್ಯಕ್ಷಮತೆ ಮತ್ತು ಸುರಕ್ಷತೆ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡುತ್ತಲೇ ಬಂದಿದೆ. ಇವಿಎಂಗಳ ಹ್ಯಾಕಿಂಗ್ ಸಾಧ್ಯವಿಲ್ಲ ಎಂದು ತೋರಿಸಲು ಆಯೋಗವು ಸ್ವತ: ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿತ್ತು.
ಹ್ಯಾಕಿಂಗ್ ಮಾಡಿ ತೋರಿಸಿ ಎಂದು ಸವಾಲು ಹಾಕಿತ್ತು. ಇಷ್ಟಾದರೂ ಮತ ಯಂತ್ರದ ಮೇಲಿನ ಸಂದೇಹಗಳು ಬಗೆಹರಿದಿಲ್ಲ. ಮುಂದುವರಿದ ರಾಷ್ಟ್ರ ವಾದ ಅಮೆರಿಕದಂತಹ ರಾಷ್ಟ್ರದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಇವಿಎಂಗಳನ್ನು ಬಳಸಿಲ್ಲ. ೨೦೨೦ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಯಲ್ಲಿ ಇವಿಎಂ ಮೂಲಕ ಚುನಾವಣಾ ಅಕ್ರಮಗಳು ನಡೆದ ದೂರುಗಳು ಕೇಳಿ ಬಂದಿದ್ದವು. ಈ ವರ್ಷ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಇವಿಎಂ ಬೇಕು, ಬೇಡ ಎಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಎಲಾನ್ ಮಸ್ಕ್, ಇವಿಎಂಗಳನ್ನು ಹ್ಯಾಕಿಂಗ್ ಮಾಡಲು ಸಾಧ್ಯವಿದೆ.
ಮುಂಬರುವ ಚುನಾವಣೆಯಲ್ಲಿ ಇದನ್ನು ಬಳಸಬಾರದು ಎಂದು ಸಲಹೆ ಮಾಡಿದ್ದರು. ಎಲಾನ್ ಮಸ್ಕ್ ಹೇಳಿಕೆ ಅಮೆರಿಕಕ್ಕಿಂತಲೂ ಭಾರತದಲ್ಲಿ ಹೆಚ್ಚು ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆ ಇವಿಎಂಗಳ ಬಗ್ಗೆ ತಕರಾರು ಎತ್ತಿದವರಾರೂ ತಂತ್ರಜ್ಞರಾಗಿರಲಿಲ್ಲ. ಇದೀಗ ಎಲಾನ್ ಮಸ್ಕ್ ನಂತಹ ತಾಂತ್ರಿಕ ಕ್ಷೇತ್ರದ ದಿಗ್ಗಜ ವ್ಯಕ್ತಿಯೇ ಇವಿಎಂಗಳ ಹ್ಯಾಕಿಂಗ್ ಸಾಧ್ಯ ಎಂದು ಹೇಳಿರುವುದು ಜನರನ್ನು ಗೊಂದಲಕ್ಕೆ ತಳ್ಳಿದೆ. ಇವಿಎಂ ಬಗ್ಗೆ ಮೊದಲಿ ನಿಂದಲೂ ಆಕ್ಷೇಪ ವ್ಯಕ್ತಪಡಿಸಿದ್ದ ರಾಹುಲ್ ಗಾಂಽ ಮಸ್ಕ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
“ ಇವಿಎಂಗಳು ವಿಮಾನಗಳ ಬ್ಲ್ಯಾಕ್ ಬಾಕ್ಸ್ ಇದ್ದಂತೆ, ಇವುಗಳ ಪರಿಶೀಲಿಸಲು ಯಾರಿಗೂ ಬಿಡುವುದಿಲ್ಲ” ಎಂದು ರಾಹುಲ್ ಪರೋಕ್ಷವಾಗಿ ಚುನಾವಣಾ ಆಯೋಗದ ನಡೆಯನ್ನು ಖಂಡಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಭಾರತದಲ್ಲಿ ಇವಿಎಂಗಳ ಟ್ಯಾಂಪರಿಂಗ್ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿ ದ್ದಾರೆ. ಇದೇನೇ ಇರಲಿ ಇವಿಎಂಗಳ ಕುರಿತ ಜನರ ಅಪನಂಬಿಕೆಯನ್ನು ಹೋಗಲಾಡಿಸುವ ಕೆಲಸವನ್ನು ಚುನಾವಣೆ ಆಯೋಗವೇ ಮಾಡಬೇಕಿದೆ.