Wednesday, 11th December 2024

ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಬೀಳಲಿ

ಪಿಎಸ್‌ಐ ನೇಮಕದಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣ ಮಾಸುವ ಮುನ್ನವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದ ಎಫ್ ಡಿಎ, ಎಸ್‌ಡಿಎ ಪರೀಕ್ಷೆಯಲ್ಲಿ ಅಕ್ರಮವೆಸಗಿರುವುದು ಕಂಡು ಬಂದಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರಕಾರಿ ಹುದ್ದೆಗೆ ಆಯ್ಕೆಗೊಳ್ಳುವುದು ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿಯ ಕನಸಾಗಿರುತ್ತದೆ. ಆದರೆ, ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿರುವುದು ವಿಪರ್ಯಾಸ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ನ್ಯಾಯಯುತವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ತಮ್ಮ ಕನಸನ್ನು ನನಸಾಗಿಸಲು ಅನೇಕ ಸವಾಲು ಎದುರಿಸಿ ಹುದ್ದೆಗಳ ಸಂಖ್ಯೆ ಬೆರಳಣಿಕೆಯಷ್ಟಿದ್ದರೂ ಸಾವಿರಾರು-ಲಕ್ಷಾಂತರ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಾರೆ.

ಆದರೆ ಅವರು ಎದುರಿಸುವ ಪರೀಕ್ಷೆಗಳಲ್ಲಿಯೇ ದೊಡ್ಡಮಟ್ಟದಲ್ಲಿ ಅಕ್ರಮಗಳು ನಡೆಯುತ್ತಿವೆ. ಇದರಿಂದಾಗಿ ಬಡ ಮತ್ತು ಪ್ರತಿಭಾವಂತ ನಿರುದ್ಯೋಗಿ ಗಳ ಕನಸಿಗೆ ತಣ್ಣೀರೆರಚಿದಂತೆ. ಅಷ್ಟೇ ಅಲ್ಲದೆ ಅನ್ಯಾಯ ಎಸಗಿದಂತೆಯೂ ಆಗುತ್ತದೆ. ಸರಕಾರ ಕೆಇಎ, ಕೆಪಿಎಸ್‌ಸಿ ಮತ್ತು ಬೇರೆ ಬೇರೆ ಸಂಸ್ಥೆಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ತೇರ್ಗಡೆಯಾದವರನ್ನು ಅರ್ಹತೆಯ ಮಾನದಂಡದ ಆಧಾರದಲ್ಲಿ ಹುದ್ದೆಗಳಿಗೆ ನೆಮಿಸಿಕೊಳ್ಳುವ ವಿಧಾನವನ್ನು ಸರಕಾರ ಮೊದಲಿಂದಲೂ ಅನುಸರಿಸುತ್ತ ಬಂದಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ವಿದ್ಯಾವಂತ ನಿರುದ್ಯೋಗಿಗಳನ್ನು ತೀವ್ರ ಹತಾಶರನ್ನಾಗಿಸಿದೆ.

ಕೆಎಎಸ್, ಪಿಎಸ್‌ಐ, ಎಸ್‌ಡಿಎ, ಎಫ್ ಡಿಎ ಹಾಗೂ ಸಹಾಯಕ ಪ್ರಾಧ್ಯಾಪಕರ ಮತ್ತು ಇನ್ನುಳಿದ ಹುzಗಳ ನೇಮಕಕ್ಕೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಕಾನೂನು ನಿಯಮಾವಳಿಗಳ ಅನುಸಾರ ನ್ಯಾಯಯುತವಾಗಿ ಪಾರದರ್ಶಕವಾಗಿ ನಡೆದಲ್ಲಿ ಮಾತ್ರ ಗೌರವ, ಘನತೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಪರೀಕ್ಷೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿರಲಿ, ಎಷ್ಟೇ ಪ್ರಭಾವಶಾಲಿಯಾರಲಿ, ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕಠಿಣ ಕ್ರಮ ವಹಿಸಬೇಕು.