Saturday, 14th December 2024

ದೃಷ್ಟಿದೋಷ ಸರಿಪಡಿಸಿಕೊಳ್ಳಲಿ!

ಖಲಿಸ್ತಾನಿ ಉಗ್ರ ಹಾಗೂ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಭಾರತದ ಚಿತಾವಣೆಯಿದೆ ಎಂದು ಆರೋಪಿಸಿ ಕೆನಡಾ ಸರಕಾರವು ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಕೆಲವೇ ಗಂಟೆಗಳಲ್ಲಿ ಭಾರತವೂ ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿ, ಮುಂದಿನ ಐದು ದಿನ ದೊಳಗೆ ಗಂಟುಮೂಟೆ ಕಟ್ಟುವಂತೆ ಖಡಕ್ ಸೂಚನೆ ನೀಡಿದೆ.

ಜತೆಗೆ ಭಾರತದ ವಿದೇಶಾಂಗ ಸಚಿವಾಲಯ, ‘ಕೆನಡಾದಲ್ಲಿನ ಯಾವುದೇ ಹಿಂಸಾಚಾರದಲ್ಲಿ ಭಾರತ ಸರಕಾರ ಭಾಗಿಯಾಗಿದೆ ಎಂಬ ಆರೋಪ ತೀರಾ ಅಸಂಬದ್ಧ; ನಮ್ಮಲ್ಲಿರುವುದು ಕಾನೂನಾತ್ಮಕ ಆಳ್ವಿಕೆಯೆಡೆಗೆ ಬದ್ಧತೆ ಹೊಂದಿರುವ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಅತಿರೇಕದ ಜಾಗತಿಕ ಪೈಪೋಟಿ, ಭೂರಾಜಕೀಯ, ಪರದೇಶಗಳ ಆಡಳಿತದಲ್ಲಿ ಮೂಗುತೂರಿಸುವಿಕೆ, ತನ್ನ ಇಶಾರೆಗೆ ತಕ್ಕಂತೆ ಕುಣಿಯದ ದೇಶಗಳಲ್ಲಿ ಅಸ್ಥಿರತೆ ಮೂಡಿಸುವಿಕೆ ಇವೇ ಮೊದಲಾದ ಕೆಲಸಕ್ಕೆ ಬಾರದ ಬಾಬತ್ತುಗಳಲ್ಲೇ ದಿನದೂಡುವುದು ಕೆಲ ದೇಶಗಳ ಚಾಳಿಯೇ ಆಗಿದ್ದ ಸಂದರ್ಭದಲ್ಲಿ, ‘ವಸುಧೈವ ಕುಟುಂಬಕಂ’ ಎಂಬ ಪರಿಕಲ್ಪನೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟು, ಹೆಗಲಿಗೆ ಹೆಗಲಾಗಿ ‘ವೈಶ್ವಿಕ ಪ್ರಗತಿ’ ಸಾಧಿಸುವ ನಿಲುವನ್ನು ಪುನರುಚ್ಚರಿಸುತ್ತಿದೆ ಭಾರತ.

ಇದು ಭಾರತೀಯ ಪರಂಪರೆಯಲ್ಲಿ ಅನೂಚಾನವಾಗಿ ಬಂದಿರುವ ಸೌಜನ್ಯದ ಪ್ರತಿರೂಪ. ಆದರೆ ಈ ಸೌಜನ್ಯವೇ ಕೆಲ ದೇಶಗಳಿಗೆ ‘ದೌರ್ಬಲ್ಯ’ವಾಗಿ ಕಾಣುವುದೂ ಇದೆ. ಯಾವುದೇ ಅಹಮಿಕೆಗೆ ಆಸ್ಪದ ನೀಡದೆ, ಪುಟ್ಟದ್ವೀಪ-ದೊಡ್ಡರಾಷ್ಟ್ರ ಎಂದು ಭೇದಭಾವ ಮಾಡದೆ ವಿಶ್ವದ ಎಲ್ಲ ದೇಶಗಳೆಡೆಗೂ ಸ್ನೇಹಹಸ್ತ
ಚಾಚಲು ತವಕಿಸುತ್ತಿರುವ ಭಾರತದ ವರ್ತನೆಯು ಕೆನಡಾದ ಆಳುಗರಿಗೆ ‘ಪರರೆದುರು ಕೈ ಹೊಸೆಯುತ್ತಾ ಹಲ್ಲುಗಿಂಜುವ ದೈನೇಸಿ ಸ್ಥಿತಿಯಾಗಿ’ ಕಂಡಿದ್ದರೆ ಅದು ಆವರ ದೃಷ್ಟಿದೋಷವೇ ವಿನಾ ಭಾರತದ ರಾಚನಿಕ ನ್ಯೂನತೆಯಲ್ಲ. ಉಗ್ರವಾದದ ಮತ್ತು ಉಗ್ರವಾದಿಗಳ ನಿರ್ಮೂಲನೆಯು ಭಾರತ ಸರಕಾರದ ಸಂಕಲ್ಪಪಟ್ಟಿಯಲ್ಲಿ ಆದ್ಯತಾ ಸ್ಥಾನದಲ್ಲಿರುವುದು ಖರೆ; ಹಾಗೆಂದ ಮಾತ್ರಕ್ಕೆ ಈ ನಿಟ್ಟಿನಲ್ಲಿ ಮತ್ತೊಂದು ರಾಷ್ಟ್ರದ ದಿನಚರಿಯ ಪುಟದಲ್ಲಿ ತನ್ನ ಬರಹ ದಾಖಲಿಸಿ ಹಸ್ತಾಕ್ಷರ ಹಾಕುವ ತೆವಲು ಭಾರತಕ್ಕಿಲ್ಲ. ಇದನ್ನು ಕೆನಡಾ ಆದಷ್ಟು ಬೇಗ ಅರಿತರೆ ಒಳಿತು!