Sunday, 13th October 2024

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿದ್ದು, ಮೊದಲ ದಿನವೇ ಕೆಲವು ಅಹಿತಕರ ಘಟನೆಗಳು ನಡೆದಿವೆ. ಮೈಸೂರಿನಲ್ಲಿ
ಬಾಲಕಿಯೊಬ್ಬಳು ಪರೀಕ್ಷೆ ಶುರುವಾದ 5 ನಿಮಿಷಗಳಲ್ಲೇ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.

ಪರೀಕ್ಷೆ ಬಗೆಗಿನ ಭಯವೇ ಈ ಸಾವಿಗೆ ಕಾರಣ ಎನ್ನಲಾಗಿದೆ. ಒಂದೊಮ್ಮೆ ಅದು ನಿಜ ವಾಗಿದ್ದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ. ವಿದ್ಯಾರ್ಥಿಗಳೇ…ಪರೀಕ್ಷೆ ಎಂಬುದು ನಮ್ಮ ಶೈಕ್ಷಣಿಕ ಜೀವನವನ್ನು ಕಾಲಕಾಲಕ್ಕೆ ಅಳೆಯುವ ಮಾನದಂಡವೇ ಹೊರತು ನಮ್ಮ ಇಡೀ ಜೀವನದ ಪರೀಕ್ಷೆಯಲ್ಲ. ವಿದ್ಯೆ ಎಂಬುದು ಕೇವಲ ಅಕ್ಷರಗಳಲ್ಲಿ ಮಾತ್ರ ಇಲ್ಲ.

ಡಾ.ರಾಜ್‌ಕುಮಾರ್, ಸಚಿನ್ ತೆಂಡೂಲ್ಕರ್ ಅವರಂಥಹ ಮಹಾನ್ ಚೇತನಗಳು ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಕಂಡವರಲ್ಲ. ಆದರೂ ತಮಗೆ ಒಲಿದಿರುವ ವಿದ್ಯೆ ಯಿಂದಲೇ ಅವರೆಲ್ಲ ಆ ಮಟ್ಟಿಗಿನ ಹೆಸರು, ಯಶಸ್ಸು ಗಳಿಸಿದವರು ಎಂಬುದನ್ನು ಅರ್ಥ ಮಾಡಿ ಕೊಂಡು, ಅಂಥವರನ್ನು ಆದರ್ಶವಾಗಿಟ್ಟುಕೊಳ್ಳಿ. ಪೋಷಕರು ಕೂಡ ಅಂಕಾ ಧಾರಿತ ಶಿಕ್ಷಣದ ಬೆನ್ನು ಬಿದ್ದಿರುವುದರಿಂದಲೇ ಮಕ್ಕಳು ಒತ್ತಡಕ್ಕೆ ಸಿಲುಕುತ್ತಿದ್ದಾರೆ.

ತಮ್ಮ ಮಕ್ಕಳು ಗರಿಷ್ಠ ಅಂಕ ಸಂಪಾದಿಸಿ ಎಂಜಿನಿಯರೋ, ಡಾಕ್ಟರೋ ಆಗಬೇಕು ಎಂಬುದು ಪ್ರತಿಯೊಬ್ಬ ಪೋಷಕರಲ್ಲಿ ಆಸೆ ಇರುವುದು ತಪ್ಪಲ್ಲ. ಆದರೆ ಈ ಎಂಜಿನಿಯರ್, ಡಾಕ್ಟರ್ ಮಾಡಬೇಕೆಂಬ ವ್ಯಾಮೋಹದಲ್ಲಿ ಮುಗ್ದ ಮನಸ್ಸುಗಳ ಮೇಲೆ ಒತ್ತಡ ಹೇರು ವುದು ಸರಿಯಲ್ಲ. ಪ್ರತಿ ಕ್ಷೇತ್ರಕ್ಕೂ ಅದರದೇಯಾದ ಘನತೆ ಇರುತ್ತದೆ. ನಿಮ್ಮ ಮಗ/ಮಗಳು ಒಳ್ಳೆಯ ನಟ/ನಟಿಯಾಗಬಹುದು, ಒಳ್ಳೆಯ ಆಟಗಾರರಾಗಬಹುದು, ತನಗಿಷ್ಟವಾದ ಯಾವುದೇ ಕ್ಷೇತ್ರದಲ್ಲೂ ಆತ/ಅವಳು ಸಾಧನೆ ಮಾಡಬಹುದು.

ಅವರ ಇಷ್ಟವಾದ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು. ಅದಕ್ಕಾಗಿಯೇ
ಹಿರಿಯರು ‘ಮನೆಯೇ ಮೊದಲು ಪಾಠ ಶಾಲೆ’ ಎಂದು ಹೇಳಿದ್ದಾರೆ. ಮನೆಯಲ್ಲೇ ಪೋಷಕರು ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣ
ಮಾಡಿದರೆ ಅವರು ಚಿಕ್ಕ ಚಿಕ್ಕ ಪರೀಕ್ಷೆಗಳಿಗೂ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರೂ ಮಕ್ಕಳ ಲ್ಲಿನ ಪರೀಕ್ಷೆ ಬಗೆಗಿನ ಭಯವನ್ನು ಹೊಗಲಾಡಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳೂ ಕೂಡ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು.