ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ನಿಬಂಧನೆ ಬಗ್ಗೆ ಮೂಡಿದ್ದ ಆತಂಕ ನಿವಾರಣೆಯಾಗಿದೆ. ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿ ದಂತೆ ಹಳೆಯ ಮಾನದಂಡಗಳೇ ಮುಂದುವರಿಯುವುದು ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸಮರ್ಪಕವಾಗಿ ಆಹಾರ ಪೂರೈಸುವ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅವಶ್ಯ. ಆದರೆ ಮಾನದಂಡಗಳು ಸಮಂಜಸವಾಗಿರಬೇಕೆ ಹೊರತು ಗೊಂದಲ ಮೂಡಿಸುವಂತಿರಬಾರದು. ಪಡಿತರ ಚೀಟಿಗಳನ್ನು ಆಧಾರ್ ಕಾರ್ಡಿನೊಂದಿಗೆ ಲಿಂಕ್ ಮಾಡಿದ ನಂತರ ದೇಶದಲ್ಲಿ 3 ಕೋಟಿ ಈ ಅಕ್ರಮ ಕಾರ್ಡ್‌ಗಳು ಪತ್ತೆಯಾಗಿವೆ.
ಕರ್ನಾಟಕ ರಾಜ್ಯ ಒಂದರಲ್ಲಿಯೇ ೨೫ಲಕ್ಷ ಅಕ್ರಮ ಪಡಿತರ ಚೀಟಿ ಪತ್ತೆ ಯಾದವು. ಇವುಗಳನ್ನು ಪತ್ತೆಹಚ್ಚಿ ಕ್ರಮ ಜರುಗಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯ ಶ್ಲಾಘನೀಯ. ಇದರಿಂದಾಗಿ ಅರ್ಹರಿಗೆ ಪಡಿತರ ಸೌಲಭ್ಯ ದೊರೆಯಲು ಪೂರಕ ವಾತಾವರಣ ಸೃಷ್ಟಿಯಾಗಿದೆ. 81 ಕೋಟಿ ಫಲಾನುಭವಿಗಳಿರುವ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಗೆ 610 ಲಕ್ಷ ಟನ್ ಆಹಾರ ಧಾನ್ಯ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ 1.78 ಲಕ್ಷ ಕೋಟಿ ರುಪಾಯಿ ಸಹಾಯಧನ ನೀಡುತ್ತಿದೆ.
ಅಕ್ರಮ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಿದರೆ ಕರ್ನಾಟಕ ರಾಜ್ಯದಲ್ಲಿಯೇ ವಾರ್ಷಿಕ ಸುಮಾರು 400 ಕೋಟಿ ರು.ನಷ್ಟು ಉಳಿತಾಯವಾಗಲಿದೆ. ಈ ರೀತಿ ಅಕ್ರಮವನ್ನು ತಡೆದು ಅರ್ಹರಿಗೆ ಪಡಿತರ ತಲುಪುವಂತೆ ಆಡಳಿತ ನಡೆಸುವುದು ಸರಕಾರದ
ಮುಖ್ಯ ಜವಾಬ್ದಾರಿ. ಬಿಪಿಎಲ್ ಕಾರ್ಡ್ ವಿತರಣೆಗೆ ಹೊಸ ಮಾನದಂಡಗಳನ್ನು ರೂಪಿಸಲು ಆಯಾ ಕುಟುಂಬದ ಗಳಿಕೆ –
ವರಮಾನ – ಆರ್ಥಿಕ ಪರಿಸ್ಥಿತಿಯ ಆಧಾರವನ್ನು ಪರಿಗಣಿಸಬೇಕೆ ಹೊರತು ಫ್ರಿಡ್ಜ್, ಬೈಕ್, ಟಿ.ವಿ ಹೊಂದಿರುವ ಕುಟುಂಬಗಳಿಗೆ ಬಿಪಿಎಲ್ ರದ್ದುಪಡಿಸುವಂಥ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸುವ ಪ್ರಯತ್ನಗಳು ಅಸಮಂಜಸ.