ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಭತ್ತ ಮತ್ತು ರಾಗಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆಗೆ
ರಾಜ್ಯಾದ್ಯಂತ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೀಗಾಗುತ್ತಿರುವುದು ಇದೇ ಮೊದಲಲ್ಲ, ಪ್ರತಿ ವರ್ಷವೂ ಇದೇ ರೀತಿ ಇದೆ. ಇದಕ್ಕೆ ಹಲವು ಕಾರಣಗಳು ಇವೆ. ಖರೀದಿ ಕೇಂದ್ರ ಗಳಲ್ಲಿ ನೋಂದಣಿ, ಮಾರಾಟ ಮಾಡಲು ಆರ್‌ಟಿಸಿ ಸೇರಿದಂತೆ ಹಲವು ದಾಖಲೆಗಳು ಅಗತ್ಯವಾಗಿವೆ. ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳ ಬೇಕಿದ್ದು, ಹೆಚ್ಚಿನ ಗುಣಮಟ್ಟವನ್ನು ಅಧಿಕಾರಿಗಳು ಕೇಳುತ್ತಾರೆ. ಖರೀದಿ ಕೇಂದ್ರ ಅಥವಾ ಅಕ್ಕಿ ಗಿರಣಿಗೆ ರೈತರೇ ತೆಗೆದುಕೊಂಡು ಹೋಗಬೇಕಿದೆ.
ಅಲ್ಲದೆ, ಖರೀದಿ ಮಿತಿಯೂ ಇದೆ. ಈ ಬಾರಿ ಸರಕಾರವು ಪ್ರತಿ ಕ್ವಿಂಟಲ್ ಭತ್ತಕ್ಕೆ ೨,೦೪೦ ರು. (ಸಾಮಾನ್ಯ) ಮತ್ತು ೨,೦೬೦ ರು. (ಉತ್ತಮ ದರ್ಜೆ) ಹಾಗೂ ಪ್ರತಿ ಕ್ವಿಂಟಲ್ ರಾಗಿಗೆ ೩,೫೭೮ ರು. ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದೆ. ಸರಕಾರ ನಿಗದಿ ಪಡಿಸಿರುವ ಬೆಂಬಲ ಬೆಲೆ ಗಿಂತಲೂ ಹೆಚ್ಚಿನ ಬೆಲೆ ಹೊರಗಡೆ ವ್ಯಾಪಾರಿಗಳು ಕೊಡುತ್ತಿದ್ದಾರೆ. ಈ ಬಾರಿ ಹೊರಗಡೆ ಭತ್ತಕ್ಕೆ ಕ್ವಿಂಟಲ್‌ಗೆ ೨,೪೦೦ ರಿಂದ ೨,೫೦೦ ರು. ವರೆಗೆ ಬೆಲೆ ಇದೆ. ರಾಗಿ ೩,೭೦೦ರಿಂದ ೩,೯೦೦ ರು. ವರೆಗೂ ಇದೆ. ಅಂದರೆ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚೇ ರೈತರಿಗೆ ಸಿಗುತ್ತಿದೆ. ಅಕ್ಕಿ ಗಿರಣಿಯವರು, ವ್ಯಾಪಾರಿಗಳು, ದಳಿಗಳು ಹೊಲದ ಬಳಿಗೇ ಬಂದು ರೈತರಿಂದ ಖರೀದಿಸುತ್ತಾರೆ, ದುಡ್ಡು ಅ ಪಾವತಿ ಮಾಡುತ್ತಾರೆ.
ಬೆಳೆಯನ್ನು ಮನೆಗೆ ತೆಗೆದುಕೊಂಡು ಹೋಗುವ, ಒಣಗಿಸುವ, ಸಂಗ್ರಹಿಸಿಡುವ ಪ್ರಮೇಯವೇ ಇರುವುದಿಲ್ಲ. ಆ ವೆಚ್ಚವೆಲ್ಲವೂ ರೈತರಿಗೆ ಉಳಿತಾಯವಾಗುತ್ತದೆ. ಬೆಂಬಲ ಬೆಲೆಯ ಯೋಜನೆ ಉದ್ದೇಶ ಬೆಳೆ ಖರೀದಿ ಒಂದೇ ಅಲ್ಲ. ಮಾರುಕಟ್ಟೆಯಲ್ಲಿ ಭತ್ತ, ರಾಗಿಯ ಬೆಲೆ ಸ್ಥಿರತೆ ಇರುವಂತೆ ನೋಡಿಕೊಳ್ಳುವ ಉದ್ದೇಶವೂ ಇದೆ. ಆದ್ದರಿಂದ ಸರಕಾರ ರೈತರಿಗೆ ನೋಂದಣಿ ತಕ್ಷಣವೇ ಮುಕ್ತ
ಮಾರುಕಟ್ಟೆಯಲ್ಲಿ ನೀಡುವ ಧಾರಣೆಯನ್ನು ನೀಡಲು ಮುಂದಾಗಬೇಕು. ಅಲ್ಲದೆ, ಖರೀದಿ ಕೇಂದ್ರಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಖಾಸಗಿಗಿಂತ ಸರಕಾರ ಬೆಲೆ ಹೆಚ್ಚಳ ಮಾಡಬೇಕು.
Read E-Paper click here