Wednesday, 11th December 2024

ಸಾಲು ಸಾಲು ಹಬ್ಬವಾಗದಿರಲಿ ಕರೋನಾಕ್ಕೆ ಆಹಾರ

#corona

ಕರ್ನಾಟಕದಲ್ಲಿ ಎರಡನೇ ಅಲೆ ಇಳಿದಿದೆ ಎನ್ನಲಾಗಿದ್ದರೂ, ಈಗ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಈ ನಡುವೆ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಹಿಂದೂಗಳ ಸಾಲು ಸಾಲು ಹಬ್ಬಗಳಿವೆ. ಇದರೊಂದಿಗೆ ಮುಸ್ಲಿಮರಿಗೆ ಮೊಹರಂ ಆಚರಣೆಯಿದೆ.

ಆದ್ದರಿಂದ ರಾಜ್ಯ ಸರಕಾರ, ಹಬ್ಬಗಳ ಸಾಲಿನಲ್ಲಿ ಎಚ್ಚರಿಕೆಯಿಂದರಬೇಕು. ಈಗಾಗಲೆ ಕೇರಳದಲ್ಲಿ ಅಲ್ಲಿನ ಸರಕಾರ ಸೋಂಕು ಕಡಿಮೆಯಾಯಿತು ಎಂದು ಬಕ್ರಿದ್ ಹಬ್ಬಕ್ಕೆ ಅವಕಾಶ ನೀಡಿದ್ದರಿಂದ ಆಗಿರುವ ಅನಾಹುತ ಗಳು ನಮ್ಮ ಕಣ್ಣಮುಂದಿದೆ. ಇಡೀ ದೇಶದಲ್ಲಿ ಕರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದರೂ, ಕೇರಳ ದಲ್ಲಿ ಮಾತ್ರ ಇಡೀ ದೇಶದ ೫೦ರಷ್ಟು ಪ್ರಕರಣಗಳು ಅಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ಗಣೇಶ ಚತುರ್ಥಿ, ಮೊಹರಂ, ಕೃಷ್ಣಜನ್ಮಾಷ್ಟಮಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಹೆಚ್ಚೆಚ್ಚು ಜನ ಒಂದು ಕಡೆ ಸೇರದಂತೆ ನೋಡಿಕೊಳ್ಳಬೇಕಿದೆ.

ಅದರಲ್ಲಿಯೂ ಕರ್ನಾಟಕದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾರ್ವಜನಿಕವಾಗಿ ಗಣಪತಿ ಕೂರಿಸಿ ಸಹಸ್ರಾರು ಜನರು ಸೇರಿ ಸಂಭ್ರಮಾಚರಣೆ ಮಾಡುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಮಾಡುವ ಸಂಪ್ರದಾಯವಿದೆ. ಇನ್ನು ಹಬ್ಬಗಳ ಸಾಲಿನ ಸಮಯದಲ್ಲಿ ಮತ್ತೊಂದು ಮಹತ್ವದ ವಿಷಯವಿದೆ. ಅದೇನೆಂದರೆ, ಸರಳವಾಗಿ ಆಚರಣೆ ಒಂದು ಭಾಗವಾದರೆ, ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕರೋನಾ ಮಾರ್ಗಸೂಚಿ ಯಾವುದು ಪಾಲನೆಯಾಗುವು ದಿಲ್ಲ. ಇದರಿಂದಲೂ ಕರೋನಾ ಹಬ್ಬುವ ಸಾಧ್ಯತೆ ದಟ್ಟವಾಗಿದೆ. ಈ ಎಲ್ಲವನ್ನು ಗಮನ ದಲ್ಲಿರಿಸಿಕೊಂಡು, ಸರಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕು ಹಾಗೂ ಜನರು ಸಹ ಹಬ್ಬ ಎಂದ ಕೂಡಲೇ ವಿಜೃಂಭಣೆಯಿಂದಲೇ ಮಾಡಬೇಕು ಎನ್ನುವ ಮನಸ್ಥಿತಿಯ ಬದಲು, ಸರಳವಾಗಿ ಆಚರಿಸುವುದು ಸೂಕ್ತ.