ರಾಜ್ಯದ ಅನೇಕ ಭಾಗಗಳಲ್ಲಿ ವರುಣನ ಆರ್ಭಟದಿಂದಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ಅಪಾಯಕಾರಿ ಸ್ವರೂಪ ಪಡೆದುಕೊಂಡಿವೆ. ಜಲಾಶಯಗಳು ಭರ್ತಿಯಾಗಿ ಹೊರ ಹರಿವು ಹೆಚ್ಚಾಗಿದೆ. ಅವ್ಯಾಹತ ಮಳೆ, ಗಾಳಿಯಿಂದ ವ್ಯಾಪಕ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದೆ. ಅನೇಕ ಕಡೆ ಸತ್ತವರನ್ನು ಮಣ್ಣು ಮಾಡುವುದಕ್ಕೂ ಸ್ಥಳವಿಲ್ಲದಂತಾಗಿದೆ. ಕುಸಿದ ಮನೆ ಕಟ್ಟಲಾಗದೆ ಒಡಕು ಮನೆಯಲ್ಲೇ ದಿನಕಳೆಯುತ್ತಿದ್ದಾರೆ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ
ಮಾತ್ರ ಸ್ಪಂದಿಸುತ್ತಿದ್ದಾರೆ. ಬಹಳಷ್ಟು ಉಸ್ತುವಾರಿ ಸಚಿವರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಳಲು
ಆಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಮಳೆ-ನೆರೆ ಹಾನಿ ನಿರ್ವಹಣೆ ಜತೆಗೆ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ
ಸಂಪುಟ ಸಹೋದ್ಯೊಗಿಗಳಿಗೆ ನಯವಾಗಿಯೇ ಚುರುಕು ಮುಟ್ಟಿಸಿದ್ದಾರೆ.
ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಂಕಷ್ಟದ
ಸಂದರ್ಭದಲ್ಲಿ ಜನರ ಸಮಸ್ಯೆ ಆಲಿಸಿ, ಅವರಿಗೆ ಪರಿಹಾರ ಒದಗಿಸುವುದರ ಜತೆಗೆ ಧೈರ್ಯ ತುಂಬಬೇಕಾದ ಕೆಲಸವನ್ನು ಜನಪ್ರತಿನಿಧಿಗಳು, ಅಧಿಕಾರಿ ಗಳು ಮಾಡಬೇಕಿದೆ. ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸುವ ಮೂಲಕ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ಸಂತ್ರಸ್ತರಿಗೆ ಕೂಡಲೇ
ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕು.
ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮನೆ-ಮಠ ಕಳೆದುಕೊಂಡವರಿಗೆ, ಜೀವ ಹಾನಿಗೊಳಗಾದವರಿಗೆ ತಡಮಾಡದೆ ಸರಕಾರ ಸಹಾಯಹಸ್ತ ಚಾಚಬೇಕು. ಸಂತ್ರಸ್ತರಾಗಿರುವ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರಕಾರವು ರಾಜ್ಯಕ್ಕೆ ವಿಶೇಷ ಅರ್ಥಿಕ ನೆರವು ನೀಡಬೇಕು. ರಾಜ್ಯ ಸರಕಾರ ಕೂಡ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕು. ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆ ಯನ್ನು ಸರಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.
ಸಚಿವರು ಮತ್ತು ಅಧಿಕಾರಿಗಳು ಮಳೆ ಹಾನಿ ಗೊಳಗಾದ ಪ್ರದೇಶಗಳಿಗೆ ತೆರಳಿ ಅಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.