Sunday, 13th October 2024

ಸಕಾಲಕ್ಕೆ ಭತ್ತ ಖರೀದಿ ಕೇಂದ್ರ ತೆರೆಯಿರಿ

ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಕುಚಲಕ್ಕಿ ನೀಡಲು ನೀಡಲು ನಿರ್ಧರಿಸಿದ್ದು, ಅದಕ್ಕೆ ಬೇಕಾಗುವ ಭತ್ತವನ್ನು ರೈತರಿಂದಲೇ ಖರೀದಿಸಲು ಸರಕಾರ ನಿರ್ಧರಿಸಿರುವುದು ಸ್ವಾಗತಾರ್ಹ.

ಆದರೆ ನವೆಂಬರ್ ಅರ್ಧಕ್ಕೆ ಬಂದರೂ ಇನ್ನೂ ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದರಿಂದ ಭತ್ತ ಬೆಳೆಗಾರರು ಖಾಸಗಿ ಗಿರಣಿಗಳತ್ತ ಮುಖ ಮಾಡುವಂತಾಗಿದೆ. ಪ್ರತಿ ಬಾರಿಯೂ ಸರಕಾರವು ಖರೀದಿ ಕೇಂದ್ರಗಳನ್ನು ಡಿಸೆಂಬರ್ ಎರಡನೇ ವಾರದಲ್ಲಿ ಘೋಷಿಸುತ್ತದೆ. ಆಗ ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರು ಉತ್ಪಾದನೆಯನ್ನು ಖಾಸಗಿ ಗಿರಣಿ ಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ.

ರೈತರು ಕಟಾವು ಮಾಡಿದ ಭತ್ತವನ್ನು ಅಕಾಲಿಕ ಮಳೆ, ಇಬ್ಬನಿ, ಇಲಿ, ಹೆಗ್ಗಣಗಳ ಕಾಟದಿಂದ ಸಂರಕ್ಷಿಸಲು ಸ್ಥಳಾವಕಾಶ ಇರುವುದಿಲ್ಲ. ಅಲ್ಲದೇ ನೀರಾವರಿ ಅನುಕೂಲ ಇರುವವರು ಬೇಸಿಗೆಯ ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿರುತ್ತದೆ. ಹಾಗಾಗಿ ಅವರಿಗೆ ಪೈರನ್ನು ಗದ್ದೆಯಲ್ಲೂ ಸಂಗ್ರಹಿಸಿ ಇಡಲು ಆಗುವುದಿಲ್ಲ. ಸರಕಾರ ಖರೀದಿ ಕೇಂದ್ರ ತೆರೆದ ನಂತರವೇ ಮಾರಾಟ ಮಾಡಬೇಕೆಂದರೆ, ಮಳೆ ಬಂದರೆ ಭತ್ತ ಕಪ್ಪಾದ ನೆಪವೊಡ್ಡಿ ಅತ್ಯಂತ ಕಡಿಮೆ ದರಕ್ಕೆ ಖರೀದಿಸುತ್ತಾರೆ ಎಂಬ ಆತಂಕ ರೈತರಲ್ಲಿ ಮೂಡಿದೆ.

ಈಗಾಗಲೇ ಕೆಲವು ಕಡೆ ದಳಿಗಳು ಗರಿಷ್ಠ ? ೧,೭೦೦- ? ೧,೮೦೦ರಂತೆ ಖರೀದಿಸುತ್ತಿದ್ದಾರೆ. ಗಿರಣಿಗಳಿಗೆ ನೀಡಿದರೆ
ಅವರು ಹೇಳಿದ ದರವೇ ಅಂತಿಮವಾಗುತ್ತದೆ. ಸರಕಾರದ ಖರೀದಿ ಕೇಂದ್ರ ಆರಂಭವಾಗುವ ನಿರ್ದಿಷ್ಟ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲವಾಗಿದ್ದು, ಮುಂದಿನ ವ್ಯವಸಾಯಕ್ಕೆ ಹಣಕಾಸು ವ್ಯವಸ್ಥೆಯೂ ತಕ್ಷಣಕ್ಕೆ ಆಗಬೇಕಾದ ಅನಿವಾರ್ಯತೆಯಿಂದ ಆ ಸಂದರ್ಭದಲ್ಲಿ ಸಿಗುವ ಉತ್ತಮ ದರಕ್ಕೆ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ
ನಿರ್ಮಾಣವಾಗಿದೆ. ಕರಾವಳಿಯಲ್ಲಿ ಭತ್ತದ ಕಟಾವು ಸಾಮಾನ್ಯವಾಗಿ ಅಕ್ಟೋಬರ್ ಕೊನೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಶುರುವಾಗುತ್ತದೆ. ಆ ಸಂದರ್ಭದ ಖರೀದಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಅನುಕೂಲವಾಗುತ್ತದೆ.

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರ‍್ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೋಡವಾಗುತ್ತಿರುವ ಕಾರಣ ಬಿತ್ತನೆಗೂ ಆತಂಕವಾಗುತ್ತಿದೆ. ಆದ್ದರಿಂದ ಭತ್ತ ಖರೀದಿ ಕೇಂದ್ರ ತ್ವರಿತಗತಿಯಲ್ಲಿ ಆರಂಭಿಸ ಬೇಕಿದೆ.