Monday, 16th September 2024

ರಾಜ್ಯದಲ್ಲಿ ಹಲ್ಲು ಮೂಡಿಸಿಕೊಂಡ ವನ್ಯಜೀವಿ ಸಂರಕ್ಷಣಾ ಕಾಯಿದೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಬಲ ಅರಿವಿಗೆ ಬರುತ್ತಿದೆ. ಕಳೆದ ಮೂರ‍್ನಾಲ್ಕು ದಿನಗಳಿಂದ ‘ಹುಲಿ ಉಗುರು’ ಸಾಕಷ್ಟು ಸದ್ದುಮಾಡುತ್ತಿದೆ. ಕನ್ನಡ ಟಿವಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಪರ್ಧಿ ಸಂತೋಷ್ ಅವರು ಕೊರಳಲ್ಲಿ ಹುಲಿ ಉಗುರು ಧರಸಿದ್ದರೆಂಬ ಕಾರಣಕ್ಕೆ ಕಾರ್ಯಕ್ರಮದ ಸ್ಥಳದಿಂದಲೇ ಬಂಧಿತರಾಗಿದ್ದು ಇದಕ್ಕೆ ಮುನ್ನುಡಿಯಾಯಿತು.

ಅದರ ಬೆನ್ನಲ್ಲೇ ರಾಜ್ಯದ ಹಲವು ಧಾರ್ಮಿಕ ಮುಖಂಡರು, ಗಣ್ಯರು ಹುಲಿ ಚರ್ಮ, ಉಗುರು ಸೇರಿದಂತೆ ನಾನಾ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತು
ಗಳನ್ನು ಹೊಂದಿದ್ದಾರೆಂಬ ಕಾರಣಕ್ಕೆ ಅವರುಗಳ ನಿವಾಸಕ್ಕೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರಲ್ಲದೇ, ನೋಟಿಸ್ ಜಾರಿ ಗೊಳಿಸಿದ್ದಾರೆ. ಈ ಪೈಕಿ ಹಲವರು ತಮ್ಮ ಬಳಿ ಇರುವ ವಸ್ತುಗಳನ್ನು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿಯೂ ಇದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ೫೦ ವರ್ಷಗಳ ಹಿಂದೆ ಜಾರಿಯಾಗಿದ್ದರೂ ಮೂಲ ಪಶ್ಚಿಮ ಆಸ್ಟ್ರೇಲಿಯಾದ ಈ ಕಾನೂನು, ಜೀವವೈವಿಧ್ಯ ಸಂರಕ್ಷಣಾ ಕಾಯಿದೆಯಾಗಿ ನಮ್ಮಲ್ಲಿ ಜಾರಿಯಾಗಿದ್ದು ೨೦೧೬ರಲ್ಲಿ. ಆನಂತರವೂ ಅದು ಪರಿಣಾಮಕಾರಿಯಾಗಿ ದೇಶದಲ್ಲಿ ಜನ ಸಾಮಾನ್ಯರನ್ನು ತಲುಪಲು ಸಾಧ್ಯವಾಗಿಲ್ಲ.

ವನ್ಯಜೀವಿ ಸಂರಕ್ಷಣೆಯ ಮಹತ್ವ ಮತ್ತು ಅದರ ಸುತ್ತಲಿನ ಕಾನೂನುಗಳ ಬಗ್ಗೆ ಅನೇಕ ಜನರಿಗೆ ಇನ್ನೂ ತಿಳಿದಿಲ್ಲ ಎಂಬುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ. ಅಥವಾ ಎಲ್ಲ ಕಾನೂನಿಗೂ ಇರುವಂತೆ ಇದಕ್ಕೂ ಭಂಜಕರಿದ್ದಾರೆ ಎಂಬುದು ದುರದೃಷ್ಟಕರ ಸಂಗತಿ. ಬೇಸರದ ಸಂಗತಿಯೆಂದರೆ ಇದನ್ನು ಹೊರತುಪಡಿಸಿ ಮಾನವ ಜನಸಂಖ್ಯೆಯ ಹೆಚ್ಚಳ ಮತ್ತು ವನ್ಯಜೀವಿಗಳ ಆವಾಸಸ್ಥಾನಗಳ ಅತಿಕ್ರಮಣದಿಂದ, ಮಾನವ-ವನ್ಯಜೀವಿ ಸಂಘರ್ಷವು ಹೆಚ್ಚುತ್ತಿದೆ.

ಇದು ಸಾಮಾನ್ಯವಾಗಿ ವನ್ಯಜೀವಿಗಳ ಹತ್ಯೆಗೆ ಕಾರಣವಾಗುತ್ತಿದೆ. ಇದು ಕಾಯಿದೆ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಅಕ್ರಮ ವನ್ಯಜೀವಿ ವ್ಯಾಪಾರ ದಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ಇದು ದೊಡ್ಡ ಅಪಾಯದ ಸೂಚನೆ. ಕಠಿಣ ಕಾನೂನುಗಳ ಹೊರತಾಗಿಯೂ, ಬೇಟೆಯಾಡುವುದು ಮತ್ತು ವನ್ಯಜೀವಿ ಉತ್ಪನ್ನಗಳ ಅಕ್ರಮ ವ್ಯಾಪಾರವು ನಿರಾತಂಕವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ಇಲಾಖೆಗಳ ನಡುವಣ ಸಮನ್ವಯದ ಕೊರತೆ. ಅರಣ್ಯ, ಪೊಲೀಸ್, ಕಸ್ಟಮ್ಸ್ ಮತ್ತು ಕಂದಾಯ ಇಲಾಖೆಗಳ ನಡುವೆ ಹೊಂದಣಿಕೆ-ಸಂವಹನದ ಕೊರತೆ ತೀವ್ರವಾಗಿದೆ. ಇದು ಸಹ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಡ್ಡಿಯಾಗಿದೆ. ಇನ್ನು ಅಪರಾಧಗಳಿಗೆ ವಿಽಸುವ ಶಿಕ್ಷೆ ಸಾಕಷ್ಟು ಕಠಿಣವಾಗಿಲ್ಲ.

ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆ ಇಲ್ಲದೆ ಯಾವುದೇ ಅಭಿವೃದ್ಧಿ-ಸಂರಕ್ಷಣಾ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಇವೆಲ್ಲದರ ನಡುವೆಯೂ ರಾಜ್ಯದಲ್ಲಿ ಜಾಗೃತಿಗೆ ಕಾರಣವಾದ ಈ ಬೆಳವಣಿಗೆ ಹಾಗೂ ಇದರ ಹಿಂದಿನ ಕ್ರಮ ಶ್ಲಾಘನೀಯ.

Leave a Reply

Your email address will not be published. Required fields are marked *