Friday, 13th December 2024

ಅರಣ್ಯ ಭೂಮಿಯ ಒತ್ತುವರಿ: ತಪ್ಪಿತಸ್ಥರ ವಿರುದ್ದ ಕ್ರಮ ಅಗತ್ಯ

ರಾಜ್ಯದಲ್ಲಿ ಸುಮಾರು ೨ ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದು, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಕಾಯಿದೆ ರಚಿಸಿದರೂ ಇಷ್ಟು ದೊಡ್ಡ ಮಟ್ಟದಲ್ಲಿ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ ವಿಷಯ.

ಇದರಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೇ ಅತಿ ಹೆಚ್ಚು ಒತ್ತುವರಿಯಾಗಿದ್ದು, ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಗಂಡಾಂತರ ಎದುರಾಗಿದೆ. ಅರಣ್ಯ ಭೂಮಿ ಒತ್ತುವರಿಗೆ ಮಲೆನಾಡಿನಲ್ಲಿ ಹೆಚ್ಚುತ್ತಿರುವ ಶುಂಠಿ ಮಾಫಿಯಾವೂ ಒಂದು ಕಾರಣ. ಶುಂಠಿಗೆ ದೊರೆತ ಅಧಿಕ ಬೆಲೆಯಿಂದಾಗಿ ಆಕರ್ಷಿತರಾದ ಹೊರ ಜಿಲ್ಲೆ, ರಾಜ್ಯಗಳ ವ್ಯಾಪಾರಿಗಳು ಮಲೆನಾಡಿಗೆ ಬಂದು ಇಲ್ಲಿನ ರೈತರಿಗೆ ಅಽಕ ಬೆಲೆ ನೀಡಿ ಭೂಮಿ ಗುತ್ತಿಗೆ ಪಡೆದು ಶುಂಠಿ ಬೆಳೆಯಲು ಆರಂಭಿಸಿದ್ದಲ್ಲದೆ, ಅರಣ್ಯ ಪ್ರದೇಶ ಒತ್ತುವರಿ ಮಾಡಲು ಆರಂಭಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಶಿವಮೊಗ್ಗ ಜಿಲ್ಲೆಯೊಂದರಲ್ಲೇ ೨ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಪ್ರದೇಶದಲ್ಲೇ ಶುಂಠಿ ಬೆಳೆಯಲಾಗುತ್ತಿದೆ. ಅಡಕೆಗೆ ಆಗಾಗ ದೊರೆತ ಭಾರಿ ಧಾರಣೆ
ಪರಿಣಾಮ ಹಲವು ಭಾಗಗಳಲ್ಲಿ ಕಾಡು ಕಡಿದು ಅಡಿಕೆ ಸಸಿ ನೆಡಲಾಗಿದೆ ಎನ್ನಲಾಗಿದೆ. ಶುಂಠಿ ಮಾಫಿಯಾಗೆ ಕಡಿವಾಣ ಹಾಕುವ ಮೂಲಕ ಪಶ್ಚಿಮಘಟ್ಟವನ್ನು ಉಳಿಸಬೇಕಿದೆ. ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚುತ್ತಿದ್ದು, ಸೋಟಕ ಬಳಸುವ ಕಾರಣ ಜೀವ ವೈವಿಧ್ಯಕ್ಕೂ ಧಕ್ಕೆಯಾಗುತ್ತಿದೆ. ಕಲ್ಲು ಗಣಿಗಾರಿಕೆಯನ್ನು ಹತೋಟಿಯಲ್ಲಿಡುವ ಕೆಲಸವಾಗಬೇಕಿದೆ.

ಅಲ್ಲದೆ, ಕಾಡಿನಂಚಿನಲ್ಲಿರುವ ಹಲವು ದಶಕಗಳ ಬೆಲೆಬಾಳುವ ವೃಕ್ಷಗಳನ್ನು ಕಡಿದು ಪಟ್ಟಾಭೂಮಿ ವಿಸ್ತರಣೆ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ಈ ಬಗ್ಗೆ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಕಾಡಂಚಿನಲ್ಲಿರುವ ಹಲವು ಮುಗ್ದ ಜನರಿಗೆ ಕಾನೂನಿನ ಅರಿವಿಲ್ಲ, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕದಂತೆ ಪರಿಹಾರೋಪಾಯ ಕಂಡುಕೊಳ್ಳಲು ಸರಕಾರ ಪ್ರಯತ್ನ ಮಾಡಬೇಕಿದೆ. ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ
ಹೊಂದಿಕೊಂಡಂತೆ ಇರುವ ಬೆಲೆಬಾಳುವ ಸಾಕಷ್ಟು ಅರಣ್ಯ ಭೂಮಿಯೂ ಒತ್ತುವರಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.