Saturday, 14th December 2024

ಸಂರಕ್ಷಣೆಗಿಂತ ಬೆಳೆಸಲು ಪ್ರೋತ್ಸಾಹಿಸಿ

ರಾಜ್ಯದ ಅರಣ್ಯ, ಗೋಮಾಳ, ಸರಕಾರಿ ಭೂಮಿ ಹಾಗೂ ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮರ-ಗಿಡಗಳನ್ನು ಉಳಿಸಲು ವೃಕ್ಷ ಸಂರಕ್ಷಣಾ ಕಾಯಿದೆ ೧೯೭೬ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದಿದ್ದಾರೆ ಸಚಿವ ಈಶ್ವರ ಖಂಡ್ರೆ.

ಅನುಮತಿಯಿಲ್ಲದೆ ಮರ ಕಡಿದರೆ ಮರದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ದಂಡದೊಂದಿಗೆ ಜೈಲುಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯಿದೆಗೆ ತಿದ್ದುಪಡಿ ತರುವ ಇಂಗಿತವನ್ನು ಅವರು ವ್ಯಕ್ತ ಪಡಿಸಿ, ಪ್ರಾಣವಾಯು ನೀಡುವ, ತಾಪಮಾನ ಹೆಚ್ಚಾಗದಂತೆ ತಡೆಯುವ ಹಾಗೂ ಭೂ ಫಲವತ್ತತೆ ಕಾಪಾಡುವ ವೃಕ್ಷಗಳ ಸಂರಕ್ಷಣೆಯ ಅಗತ್ಯವಿದೆ ಎಂದಿದ್ದಾರೆ. ಸಚಿವರ ಪರಿಸರ ಕಾಳಜಿ ಮೆಚ್ಚುವಂಥದ್ದೇ. ಆದರೆ ಈಗಾಗಲೇ ಅತ್ಯಂತ ಬಿಗಿಯಾಗಿರುವ ಅರಣ್ಯ ಕಾಯಿದೆಯನ್ನು ಮತ್ತಷ್ಟು ಬಿಗಿಗೊಳಿಸಿ ಕಾನೂನಿಂದಲೇ ಅರಣ್ಯ, ಪರಿಸರ ಉಳಿಸುತ್ತೇವೆ ಎಂಬ ಚಿಂತನೆಯಲ್ಲಿಯೇ ದೋಷವಿದೆ.

ಬಹುಶಃ ಮಲೆನಾಡಿನ ವಾಸ್ತವತೆಯ ಪರಿಚಯವಿಲ್ಲದ ಅಧಿಕಾರಿಗಳ ಮಾತು ಕೇಳಿ ಸಚಿವರು ಈ ನಿರ್ಧಾರಕ್ಕೆ ಬಂದಂತಿದೆ. ಸಿರಿಗಂಧದ ಬೀಡು ಎನಿಸಿಕೊಂಡಿದ್ದ ರಾಜ್ಯವಿಂದು ಈ ಸಿರಿತನ ಕಳೆದುಕೊಳ್ಳಲು ಕಾರಣವಾಗಿರುವುದೇ ಅರಣ್ಯ ಕಾನೂನು ಎಂದರೆ ಬಯಲುಸೀಮೆ ಮೂಲದ ಸಚಿವರಿಗೆ ಸುಲಭವಾಗಿ ಅರ್ಥವಾಗದು. ಹಿಂದೆ ಮಲೆನಾಡಿನಲ್ಲಿ ಶ್ರೀಗಂಧ, ಬೀಟೆಯಂಥ ಮರಗಳು ಪ್ರಕೃತಿ ಸಹಜವಾಗಿಯೇ ಹೇರಳವಾಗಿ ಬೆಳೆದಿದ್ದವು. ಇವಕ್ಕೆ ವಾಣಿಜ್ಯ ಬೇಡಿಕೆ ಆರಂಭವಾದ ಬಳಿಕ ಇವುಗಳ ಸಂರಕ್ಷಣೆ ಹೆಸರಿನಲ್ಲಿ ಕಾನೂನು ರೂಪಿಸಲಾಯಿತು. ಆಗ ಶ್ರೀಗಂಧದ ಕಳ್ಳಸಾಗಣೆ ಶುರುವಾಯಿತು.

ಕಳ್ಳಕಾಕರು ಖಾಸಗಿಯವರ ಜಮೀನಿನಲ್ಲಿದ್ದ ಶ್ರೀಗಂಧದ ಮರಗಳನ್ನೂ ರಾತ್ರೋರಾತ್ರಿ ಕತ್ತರಿಸಿ ಸಾಗಿಸಲಾರಂಭಿಸಿದರು. ಇದನ್ನು ತಡೆಯದ ಇಲಾಖೆ, ಮರಗಳು ಕಾಣೆಯಾದ ಕಡೆ ಸಮೀಪದ ನಿವಾಸಿಗಳ ಮೇಲೆ ಪ್ರಕರಣ ದಾಖಲಿಸಲಾರಂಭಿಸಿತು. ಇದರ ಗೊಡವೆಯೇ ಬೇಡ ಎಂದುಕೊಂಡ ಮಲೆನಾಡಿಗರು ಮರದ ಬುಡಕ್ಕೆ ಬೆಂಕಿ ಹಚ್ಚಿ, ರಾಸಾಯನಿಕ ಸುರಿದು ಅವು ಸಹಜವಾಗಿ ಬಿದ್ದು ನೆಲಕ್ಕುರುಳುವಂತೆ ಮಾಡಲಾರಂಭಿಸಿದರು. ಇಂದು
ಶ್ರೀಗಂಧ ಮತ್ತು ಬೀಟೆ ಮಲೆನಾಡಿನಲ್ಲೂ ಕಾಣ ಸಿಗುತ್ತಿಲ್ಲ. ಕಾನೂನು ಬಿಗಿಗೊಳಿಸುವ ಬದಲು ಸರಕಾರ ಈ ಮರಗಳನ್ನು ಖಾಸಗಿ ಜಮೀನಿನಲ್ಲೂ
ಬೆಳೆಯಲು ಅವಕಾಶ ಕೊಟ್ಟಿದ್ದರೆ, ಇಂದು ಮಲೆನಾಡು, ಕರಾವಳಿಯಲ್ಲಿ ಅಡಕೆಯ ಬದಲು ಈ ಮರಗಳೇ ನಳನಳಿಸುತ್ತಿದ್ದವು. ಇಂದು ಕೋಲಾರ
ಮುಂತಾದ ಕಡೆ ಶ್ರೀಗಂಧದ ಕೃಷಿಗೆ ಮುಂದಾಗಿರುವ ರೈತರು, ಇದರ ಸಂರಕ್ಷಣೆಗಾಗಿಯೇ ಲಕ್ಷಾಂತರ ರೂ. ವ್ಯಯಿಸುತ್ತಿದ್ದಾರೆ.

ತೇಗದಂತೆ ಶ್ರೀಗಂಧ, ಬೀಟೆಯೂ ರೈತರ ಕೃಷಿಯ ಭಾಗವಾಗಿ ಉಳಿದ ಮರಗಳಂತೆ ಎಲ್ಲೆಡೆ ಲಭ್ಯವಾಗಿದ್ದರೆ ಕಳ್ಳತನದ ಸಮಸ್ಯೆಯೂ ಎದುರಾಗು ತ್ತಿರಲಿಲ್ಲ. ಆದ್ದರಿಂದ, ಮರಗಳ ಕಾವಲು ಕೆಲಸಕ್ಕಿಂತ, ಬೆಳೆಸುವ ಕಾರ‍್ಯದತ್ತ ಸಚಿವರು ಹೆಚ್ಚು ಗಮನಹರಿಸ ಬೇಕಿದೆ. ಮೈಸೂರು ಭಾಗದ ಕಾಡಂಚಿನ ಜನತೆ ಮತ್ತು ಮಲೆನಾಡಿಗರು ಅರಣ್ಯ ಇಲಾಖೆಯನ್ನು ವೈರಿ ಸ್ಥಾನದಲ್ಲಿ ಕಾಣುತ್ತಿದ್ದಾರೆ. ಇದು ತಪ್ಪಬೇಕಾದರೆ ಅರಣ್ಯ ಸಿಬ್ಬಂದಿ, ಪೊಲೀಸರಂತೆ ವರ್ತಿಸದೇ ಜನಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.