Friday, 2nd June 2023

ಮಹಿಳೆಯರಿಗೆ ದಾಖಲಾತಿ ರಹಿತ ಉಚಿತ ಬಸ್ ಸಂಚಾರವಾಗಲಿ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸರಕಾರದ ಗ್ಯಾರಂಟಿ ಭರವಸೆ ಗಳಲ್ಲಿ ಒಂದಾಗಿದೆ. ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಮ್ಮ ಪ್ರಮಾಣ’ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರ ಈಗಾಗಲೇ ಘೋಷಿಸಿಕೊಂಡಿದೆ.

ಇದರ ಕಾನೂನಾತ್ಮಕ ಅಂಶಗಳು ಜಾರಿಯಾಗಬೇಕಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರು, ವಿಕಲಚೇತನರು ಹಲವು ದಾಖಲಾತಿ ಸಲ್ಲಿಸಿ ಪಾಸ್ ಪಡೆದು ಓಡಾಡುತ್ತಿರುವುದು ಗೊತ್ತಿರುವ ವಿಚಾರವೇ. ಈಗಾಗಲೇ ಕಾರ್ಮಿಕ ಕಾರ್ಡ್‌ಗಳನ್ನು ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಇತ್ಯಾದಿ ವಿವರಗಳನ್ನು ಸಲ್ಲಿಸಿ ಕಾರ್ಮಿಕ ಕಾರ್ಡ್‌ಗಳನ್ನು ಪಡೆದು, ಆ ಮೂಲಕ ಉಚಿತ ಪಾಸ್‌ಗಳನ್ನು ಮಾಡಿಸಿ ಜನಸಾಮಾನ್ಯರು ಓಡಾಡುತ್ತಿದ್ದರು. ಒಂದು ವರ್ಷದವರೆಗೆ ಸಕ್ರಿಯವಾಗಿದ್ದ ಈ ಪಾಸ್‌ಗಳು ಮೂರು ತಿಂಗಳಿಗೆ ಸೀಮಿತಗೊಂಡು ಈಗ ನಿಷ್ಕ್ರಿಯಗೊಂಡಿವೆ.

ಅಂದರೆ ಕಾರ್ಮಿಕ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಮಹಿಳೆಯರಿಗೆ ಉಚಿತವಾಗಿ ನೀಡುವ ಬಸ್ ಪಾಸ್ ವ್ಯವಸ್ಥೆಗೆ ಇಂಥ ಹತ್ತು ಹಲವು ದಾಖಲಾತಿ ಪಡೆದು ಆಮೇಲೆ ಹಳ್ಳ ಹಿಡಿಯುವುದು ಬೇಡ. ಉಚಿತ ಬಸ್
ಪಾಸ್‌ಗೂ ದಾಖಲಾತಿ ಕೊಟ್ಟು ಐಡಿ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಒಂದಷ್ಟು ಹಣವೂ ಖರ್ಚಾಗುತ್ತದೆ. ಜೊತೆಗೆ ಇಂಥ ಬಸ್ ಪಾಸ್ ಕೊಡುವ ಬಿಎಂಟಿಸಿ ಕೇಂದ್ರಗಳಿಗೆ ಅಲೆಯಬೇಕಾಗುತ್ತದೆ.

ಸಾಮಾನ್ಯವಾಗಿ ಎಲ್ಲ ಬಸ್ ಗಳಲ್ಲಿ ಮಹಿಳೆಯರಿಗೆ ಸೀಟ್ ಮೀಸಲು ಇರುತ್ತದೆ. ಒಂದು ವೇಳೆ ಪುರುಷರು ಆ ಸೀಟುಗಳಲ್ಲಿ ಕುಳಿತಿದ್ದರೆ ‘ಇದು ಮಹಿಳಾ ಸೀಟು ಜಾಗ ಬಿಡ್ರಿ’ ಅಂತ ಹಕ್ಕು ಚಲಾಯಿಸುತ್ತಾರೆ. ನಾವು ಮಹಿಳೆ ನೋಡಿದ ತಕ್ಷಣ ಹೇಗೆ ಸೀಟು ಬಿಡುತ್ತೇವೋ ಹಾಗೆಯೇ ಮಹಿಳೆ ಬಸ್ ಹತ್ತಿದ ತಕ್ಷಣ ‘ಉಚಿತ ಪ್ರಯಾಣ’ ಎಂದು ಕಂಡೆಕ್ಟರ್ ಸುಮ್ಮನಾಗಬೇಕು. ‘ಎಲ್ರಿ ನಿಮ್ಮ ಉಚಿತ ಪಾಸ್, ಅದಕ್ಕೆ ಐಡಿ ತೋರಿಸಿ’ ಎಂದೆಲ್ಲ ಕಂಡೆಕ್ಟರ್ ತನಿಖೆ ಮಾಡಲು ಹೋಗಲೇಬಾರದು. ಆಗ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಫುಲ್ ಫ್ರೀಡಂ. ಜತೆಗೆ ಕಂಡೆಕ್ಟರ್‌ಗೂ ಕೆಲವು ಕಿರಿಕಿರಿಗಳು ತಪ್ಪುತ್ತವೆ. ಕರ್ನಾಟಕದಲ್ಲಿ ಇಂಥ ಹೊಸ ಪದ್ಧತಿ ಜಾರಿಯಾಗಲಿ.

error: Content is protected !!