ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಸಿಗಬೇಕಾಗಿದ್ದ ೧೨೬ ಕೋಟಿ ರು. ಅನುದಾನವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಶಾಸಕ ಮುನಿರತ್ನ ಅವರು ಬುಧವಾರ ಬೆಳಗ್ಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದು ಇದೀಗ ಎಲ್ಲೆಡೆ ಚರ್ಚೆಯ ವಿಷಯ.
ಮೇಲ್ನೋಟಕ್ಕೆ ಇದು ರಾಜಕೀಯ ಹೈಡ್ರಾಮಾ ಎಂದೆನಿಸಿದರೂ ಬಹುತೇಕ ರಾಜ್ಯದ ಎಲ್ಲ ಬಿಜೆಪಿ ಶಾಸಕರು ಮತ್ತು ಆಯಾ ಕ್ಷೇತ್ರಗಳ ಜನರ ನೋವನ್ನು ಮುನಿರತ್ನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃ ತ್ವದ ಬಿಜೆಪಿ ಸರಕಾರ ನೀಡಿದ್ದ ೪೮೫ ಕೋಟಿ ರುಪಾಯಿಗಳ ಅನುದಾನವನ್ನು ವಾಪಸ್ ಪಡೆದಿರುವ ಸರಕಾರ ತಮ್ಮದೇ ಪಕ್ಷದ ೧೧ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ ೪೦ ಕೋಟಿ ರುಪಾಯಿಯಂತೆ ವರ್ಗಾಯಿಸಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲಿ, ಬೇಡವೆಂದು ಯಾರೂ ಹೇಳುವುದಿಲ್ಲ.
ಆದರೆ ಅದಕ್ಕಾಗಿ ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನವನ್ನು ಅಪಹರಿಸುವಂಥಹ ನಡೆ ಸರಿಯಲ್ಲ. ಸರಕಾರವು ರಾಜ್ಯದ ಎಲ್ಲ ಕ್ಷೇತ್ರಗಳ ಎಲ್ಲ ಜನರನ್ನೂ ಸಮಾನವಾಗಿ ಕಾಣಬೇಕು. ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ, ಪಕ್ಷದ ಆಧಾರದಲ್ಲಿ ಸರಕಾರವು ಯಾವುದೇ ನಾಗರಿಕರ ನಡುವೆ ತಾರತಮ್ಯ ಮಾಡಬಾರದು ಎಂದು ಸಂವಿಧಾ ನವೇ ತಿಳಿಸಿದೆ. ಮಾತೆತ್ತಿದರೆ ಸಂವಿಧಾನದ ರಕ್ಷಕರಂತೆ ಮಾತನಾಡುವ ಕಾಂಗ್ರೆಸ್‌ನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಆರಿಸಿದ ಕ್ಷೇತ್ರಗಳಿಗೆ ಹಣ ನೀಡುವುದು, ಬಿಜೆಪಿಯನ್ನು ಆರಿಸಿದವರನ್ನು ಕಡೆಗಣಿಸುವುದು ಸಂವಿಧಾನಕ್ಕೆ ಎಸಗುವ ಅಪಚಾರ, ದ್ರೋಹ.
ಶಾಸಕರು ಯಾವುದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ, ಅವರು ಪ್ರತಿನಿಧಿಸುವ ಜನ ಈ ರಾಜ್ಯದ ಪ್ರಜೆಗಳು ಎನ್ನುವುದನ್ನು ಸರಕಾರ ಮರೆಯಬಾರದು. ಬಿಜೆಪಿಯೇ ಅಧಿಕಾರದಲ್ಲಿರಲಿ ಅಥವಾ ಕಾಂಗ್ರೆಸ್ ಇರಲಿ, ಕ್ಷೇತ್ರಗಳ ಅಭಿವೃದ್ಧಿಗಾಗಿ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಲೇಬಾರದು. ಇದು ಕೆಟ್ಟ ರಾಜಕೀಯ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ದ್ವೇಷದ ರಾಜಕಾರಣ ಮಾಡಿದಂತಾಗುತ್ತದೆ. ರಾಜ್ಯದ ಜನತೆಗೆ ಕೆಟ್ಟ ಸಂದೇಶವೊಂದು
ರವಾನೆಯಾದಂತಾಗುತ್ತದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಯಾ ಕ್ಷೇತ್ರದಗಳಿಗೆ ಮಂಜೂರಾಗಿದ್ದ ಅನು
ದಾನವನ್ನು ಆಯಾ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು.