Wednesday, 9th October 2024

ಜಿ೨೦ ಅಧ್ಯಕ್ಷತೆ ಭಾರತಕ್ಕೆ ದೊರೆತ ಸುವರ್ಣಾವಕಾಶ

ಜಾಗತಿಕವಾಗಿ ಅತ್ಯಂತ ಪ್ರತಿಷ್ಠಿತವಾಗಿರುವ ಜಿ೨೦ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಭಾರತ ಇಂದಿನಿಂದ (ಡಿಸೆಂಬರ್ ೧) ಒಂದು ವರ್ಷದ ಅವಧಿಗೆ ಅಲಂಕರಿಸಲಿದೆ. ಅಭಿವೃದ್ಧಿ ಹೊಂದಿದ ೨೦ ದೇಶಗಳ ಒಕ್ಕೂಟವಾಗಿರುವ ಈ ಸಂಘಟನೆಯ ಅಧ್ಯಕ್ಷತೆ ಭಾರತಕ್ಕೆ ಒಲಿದಿರುವುದು ನಿಜಕ್ಕೂ ಅರ್ಹವಾಗಿಯೇ ಇದೆ.

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಭಾರತದ ದಾಪುಗಾಲಿನ ಓಟವನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದ್ದು, ಕೋವಿಡ್ ಸಂಕಷ್ಟಗಳಿಂದಾಗಿ ಬಹಳಷ್ಟು ದೇಶಗಳು ತೀವ್ರ ಆರ್ಥಿಕ ಸಂಕಷ್ಟ ಮತ್ತು ಹಿಂಜರಿತಗಳಿಗೆ ತುತ್ತಾಗಿದ್ದರೂ ಭಾರತ ಮಾತ್ರ ಇಂತಹ ಯಾವುದೇ ಒತ್ತಡಗಳಿಗೆ ಸಿಲುಕದೆ, ದಿಟ್ಟತನದಿಂದ ಅಭಿವೃದ್ಧಿಯ ನಾಗಾಲೋಟ ವನ್ನು ಮುಂದುವರಿಸಿದೆ.

ಈ ಸನ್ನಿವೇಶದಲ್ಲಿ ಭಾರತಕ್ಕೆ ಒಲಿದುಬಂದಿರುವ ಜಿ೨೦ ಅಧ್ಯಕ್ಷ ಸ್ಥಾನವು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಮತ್ತಷ್ಟು ಮಹತ್ವದ್ದಾಗಲಿದೆ. ಈಗಾಗಲೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಭಾರತವು ಜಿ೨೦ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಏಷ್ಯಾದ ಹಿತಾಸಕ್ತಿಗಳು ಮತ್ತು ಆತಂಕಗಳು ಹಾಗೂ ಅಭಿವೃದ್ಧಿಯ ಕುರಿತ ಭಾರತದ ದೃಷ್ಟಿಕೋನ ವನ್ನು ಜಗತ್ತಿಗೆ ತಿಳಿಸಲು ಬಳಸಿಕೊಳ್ಳಲಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ. ಯಾವುದೇ ದೇಶದ ಪ್ರಗತಿ ಅಲ್ಲಿನ ತಂತ್ರಜ್ಞಾನದ ಅಭಿವೃದ್ಧಿ ಯೊಂದಿಗೆ ಮಿಳಿತವಾಗಿದೆ.

ಆದ್ದರಿಂದ ಉತ್ಕೃಷ್ಟ ಮಟ್ಟದ ತಂತ್ರಜ್ಞಾನದ ಪರಿಹಾರಗಳನ್ನು ನಿರ್ಮಿಸಲು ಭಾರತ ಗರಿಷ್ಠ ಆದ್ಯತೆ ನೀಡುತ್ತದೆ ಎಂದು ಜೈಶಂಕರ್ ನುಡಿದಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿಯೇ ದೇಶದ ಆರ್ಥಿಕ ಹಾಗೂ ರಾಜಕೀಯ ನಿರ್ಧಾರಗಳು ಮತ್ತು ಬೆಳವಣಿಗೆ ಗೆಳಿಗೆ ಕಾರಣ ವಾಗುತ್ತದೆ. ಭಾರತ ಈ ಎಲ್ಲ ವಿಚಾರಗಳಲ್ಲೂ ತನ್ನ ಸ್ವಂತ ಹಿತಾಸಕ್ತಿಗಷ್ಟೇ ಒತ್ತು ನೀಡದೆ, ದಕ್ಷಿಣ ಏಷ್ಯಾದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಿ೨೦ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಬೇಕಾಗಿದೆ. ಜಿ೨೦ ದೇಶಗಳ ಪಟ್ಟಿಯಲ್ಲಿ ಒಟ್ಟು ಐದು ಗುಂಪುಗಳಿದ್ದು, ಭಾರತ ಎರಡನೇ ಗುಂಪಿನಲ್ಲಿದೆ.

ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ಈ ಗುಂಪಿನ ಇತರ ಸದಸ್ಯರು. ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ ಮತ್ತು ಅಮೆರಿಕಗಳಿವೆ. ೩ನೇ ಗುಂಪಿನಲ್ಲಿ ಅರ್ಜೆಂಟೀನಾ, ಬ್ರೆಝಿಲ್, ಮೆಕ್ಸಿಕೋ; ೪ನೇ ಗುಂಪಿನಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಯನೈಟೆಡ್ ಕಿಂಗ್‌ಡಂ ಹಾಗೂ ೫ನೇ ಗುಂಪಿನಲ್ಲಿ ಚೀನಾ, ಇಂಡೋ ನೇಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿವೆ