ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಮತದಾರರು ನೀಡಿದ ತೀರ್ಪು ಮತ್ತು ಸಂದೇಶ ನಿಚ್ಚಳವಾಗಿದೆ. ಕಳೆದ ಮೂರು ದಶಕಗಳಲ್ಲಿಯೇ ಇಷ್ಟೊಂದು ಬಹುಮತವನ್ನು ಮತದಾರ ಯಾವ ಪಕ್ಷಕ್ಕೂ ಕೊಟ್ಟಿರಲಿಲ್ಲ. ಈಗ ಬಂದಿರುವ ಜನತಾ ತೀರ್ಪು ಕಾಂಗ್ರೆಸ್‌ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ.
ಅತಂತ್ರ ಸರಕಾರ ರಚನೆಯಿಂದ ಈ ಹಿಂದೆ ಆದ ಎಡವಟ್ಟುಗಳು ಮುಂದೆ ಆಗದಿರಲೆಂದು ಮತದಾರರು ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ‘ಗ್ಯಾರಂಟಿ’ ಯೊಜನೆಗಳು ಜನರನ್ನು ಸೆಳೆದಿವೆ. ಕೋವಿಡ್ ಸಾಂಕ್ರಾಮಿಕದಿಂದಾದ ಸಂಕಷ್ಟ, ನಿರುದ್ಯೋಗ ಮತ್ತು ಹಣದುಬ್ಬರ ತೀವ್ರ ವಾಗಿರುವ ಈ ಸಂದರ್ಭದಲ್ಲಿ ಜನರಿಗೆ ಇಂತಹ ಯೋಜನೆಗಳು ಅಗತ್ಯವಿತ್ತು. ಇದೀಗ ಆ ಗ್ಯಾರಂಟಿ ಯೋಜನೆಗಳನ್ನು ಈಡೇರಿಬೇಕಾದ ಗುರುತರ ಜವಾಬ್ದಾರಿ ನೂತನ ಸರಕಾರದ ಮೇಲೆ ಇದೆ.
ಜತೆಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಂದು ಲಕ್ಷ ಹುzಗಳನ್ನು ಭರ್ತಿ ಮಾಡುವ ಭರವಸೆಯನ್ನು ಕಾಂಗ್ರೆಸ್ ಕೊಟ್ಟಿದೆ. ಅದನ್ನು ನೆರವೇರಿಸುವುದರ ಜತೆಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸ ಬೇಕಿದೆ. ಅಲ್ಲದೆ ಈ ಹಿಂದೆ ನಡೆದ ಪಿಎಸ್‌ಐ, ಪ್ರಾಧ್ಯಾಪಕರ ನೇಮಕ ವಿವಾದಗಳನ್ನು ಬಗೆಹರಿಸಿ, ಮರು ನೇಮಕವೋ, ಮರು ಪರೀಕ್ಷೆಯೋ ಎಂಬುದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕಿದೆ. ಅಲ್ಲದೆ, ಸರಕಾರ ರಚನೆಯಾದ ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ಮುಂಗಾರು ಋತು ಆರಂಭವಾಗಲಿದೆ.
ಕಳೆದ ಕೆಲ ವರ್ಷಗಳಲ್ಲಿ ಪ್ರತಿ ಬಾರಿಯೂ ಮುಂಗಾರು ಋತು ರಾಜ್ಯದಲ್ಲಿ ಅಲಕಲಕ್ಕೆ ಕಾರಣವಾಗಿದೆ. ಅತಿವೃಷ್ಟಿ, ಪ್ರವಾಹ ಎದುರಿಸುವ ಸಿದ್ಧತೆಯನ್ನು ಸರಕಾರವು ಆರಂಭದಲ್ಲಿಯೇ ಮಾಡಿಕೊಳ್ಳಬೇಕಿದೆ. ರೈತರ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ಕೊಟ್ಟ ಭರವಸೆಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷವಾಗಿ ಈಡೇರಿಸಬೇಕಿದೆ. ಇಲ್ಲದೇ ಹೋದರೆ, ಈ ಭರವಸೆಗಳನ್ನು ನಂಬಿ ಮತ ಹಾಕಿರುವ ಮತದಾರನ ವಿಶ್ವಾಸ ಕಳೆದುಕೊಳ್ಳ ಬೇಕಾ ಗುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕರು ಗಮನದಲ್ಲಿ ಇರಿಸಿಕೊಳ್ಳಬೇಕಿದೆ.
ಇನ್ನು ಘಟಾನುಘಟಿ ನಾಯಕರೇ ಸೋತಿರುವ ಬಿಜೆಪಿಗೆ ಈ ಚುನಾವಣೆಯ ಫಲಿತಾಂಶವು ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕಿದೆ.