ಈ ವರ್ಷ ಮೇ ತಿಂಗಳಿಂದಲೇ ಮಳೆ ಆರಂಭವಾಗಿದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿಯೂ ಈ ಆರ್ಭಟ ಮುಂದುವರಿದೇ ಇದೆ. ಪರಿಣಾಮವಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ತೋಟಗಾರಿಕೆ, ಕೃಷಿ ಬೆಳೆಗಳು ಹಾಳಾಗಿದ್ದು, ರೈತರಿಗೆ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ. ಅತಿಯಾದ ಮಳೆಯಿಂದ ಜಮೀನುಗಳು ತೇವಾಂಶದಿಂದ ನಲುಗಿ ರುವುದರಿಂದ ರೈತರು ಕೈಕಟ್ಟಿ ಕುಳಿತು ಕೊಳ್ಳುವಂತಾಗಿದೆ.
ಮಳೆ ಬಿಡುವು ಕೊಡದೆ ಮುಂದುವರಿದರೆ ರೈತನ ಸ್ಥಿತಿಯನ್ನು ಊಹಿಸುವುದಕ್ಕೂ ಅಸಾಧ್ಯ ವಾಗಿದೆ. ಜಮೀನಿನಲ್ಲಿ ಜಾನು ವಾರುಗಳಿಗೆ ಮೇವು ಸಹ ಸಿಗದಂತಾಗಿದೆ. ಸಾಕಷ್ಟು ಜಮೀನುಗಳಲ್ಲಿ ಅನುಪಯುಕ್ತ ಗಿಡ ಬೆಳೆದಿರುವುದರಿಂದ ಜಾನುವಾರುಗಳಿಗೆ ಅಗತ್ಯ ವಿರುವ ಹುಲ್ಲು ಕಾಣಸಿಗದಂತಾಗಿದೆ.
ಮಳೆ ಹೆಚ್ಚಾಗಿರುವುದರಿಂದ ರೈತರು ಗುಳೆಹೋಗುವ ಪರಿಸ್ಥಿತಿಯಲ್ಲಿದ್ದಾರೆ. ಬಹುತೇಕ ಕಡೆಗಳಲ್ಲಿ ರೈತಾಪಿ ಜನರು ಸಾಲಸೋಲ ಮಾಡಿ, ಬೆಳೆ ಬೆಳೆದಿದ್ದರು. ಆದರೆ, ಕೈಗೆ ಬರುವ ಹಂತದಲ್ಲಿಯೇ ಮಳೆ ಯಿಂದ ಬೆಳೆ ಹಾನಿಯಾಗಿದ್ದು, ಮುಂದಿನ ಜೀವನಕ್ಕೆ ಏನು ಮಾಡುವುದು? ಸಾಲ ತೀರಿಸುವುದು ಹೇಗೆ ಎನ್ನುವ ಆತಂಕ ರೈತರನ್ನು ಆವರಿಸಿದೆ.
ಕೆಲ ರೈತರು ಬ್ಯಾಂಕ್, ಕೃಷಿ ಪತ್ತಿನ ಸಂಘ, ಕೈಸಾಲ ಸೇರಿದಂತೆ ಲಕ್ಷಾಂತರ ಸಾಲ ಮಾಡಿದ್ದು, ಬೆಳೆದ ಬೆಳೆ ಕೈಗೆ ಬರದೇ, ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆಗಳು ಇವೆ. ಸರಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇಂತಿಷ್ಟು ಪರಿಹಾರ ನೀಡಿ, ಕೈತೊಳೆದುಕೊಳ್ಳುತ್ತಿದೆ. ಆದರೆ, ಈ ಪರಿಹಾರ ಪಡೆಯುವುದಕ್ಕೂ ದಾಖಲೆಗಳು, ವಿಚಾರಣೆಗಳನ್ನು ಎದುರಿಸುವ ಪರಿಸ್ಥಿತಿ ರೈತ ಕುಟುಂಬಗಳದ್ದಾಗಿದೆ. ಬೆಳೆ ಹಾಳಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ದರ ಒದಗಿಸಿದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರದು.
ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ಮಾಡಬೇಕು. ರೈತರು ಕೂಡ ಕೇವಲ ಒಂದು ಬೆಳೆಯನ್ನು ನಂಬಿ ಕೃಷಿ ಮಾಡಿದಾಗ ನಷ್ಟಕ್ಕೆ ಒಳಗಾಗುವುದು ಸಹಜ. ಸಮಗ್ರ ಕೃಷಿ ಹಾಗೂ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಲು ಸಾಧ್ಯವಿದೆ, ಸರಕಾರ ರೈತರಿಗಾಗಿ ಹಲವು ಯೋಜನೆ ರೂಪಿಸಿದ್ದು, ಇದರ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ರೈತರು ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈಹಾಕದೆ ಸಮಗ್ರ ಕೃಷಿ ಹಾಗೂ ಸರಕಾರದ ಯೋಜನೆಗಳ ಪ್ರಯೋಜನ ಪಡೆಯುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳುಬೇಕು.