ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆ ಗುರುವಾರ ಬೆಳಗ್ಗೆಯಿಂದ
ಆರಂಭಗೊಂಡಿದ್ದು, ಮೊದಲ ದಿನ ರಾಜ್ಯಾದ್ಯಂತ ೬೦,೨೨೨ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೂ ಅನೇಕ ಕಡೆ ಸರ್ವರ್ ಸಮಸ್ಯೆ ಉಂಟಾ ಗಿದ್ದು, ಸಾವಿರಾರು ಜನರು ಅರ್ಜಿ ಸಲ್ಲಿಸಲಾಗದೆ ಮರಳುವಂತಾಗಿದೆ.
ಅರ್ಜಿ ಸಲ್ಲಿಕೆಗೆ ಗ್ರಾಮ ಒನ್ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರಗಳು, ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಕೇಂದ್ರ ತೆರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ದಿನಾಂಕ ಮತ್ತು ನಿರ್ದಿಷ್ಟ ಕೇಂದ್ರದ ಹೆಸರು ಫಲಾನುಭವಿಯ ಮೊಬೈಲ್‌ಗೆ ಸಂದೇಶ ಬರುತ್ತಿದೆ. ಆದರೆ ಅನೇಕ ಕೇಂದ್ರಗಳು -ಲಾನುಭವಿಗಳು ವಾಸವಿರುವ ಮನೆಗಳಿಂದ ಬಹಳ ದೂರದಲ್ಲಿವೆ. ಅಲ್ಲಿಗೆ ಹೋಗಿ, ದಿನವಿಡೀ ಕಾದರೂ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಮರುದಿನ ಅಥವಾ ಬೇರೆ ದಿನ ಬಂದು ಅರ್ಜಿ ಸಲ್ಲಿಸಬಹುದೇ ಎಂಬುದಕ್ಕೆ ಯಾರ ಬಳಿಯೂ ಉತ್ತರ ಇಲ್ಲದಂತಾಗಿದೆ. ಸರಕಾರ ತೆರೆದಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ಆದ್ದರಿಂದ ಸರಕಾರ ಆದಷ್ಟು ಬೇಗ ಸರ್ವರ್ ಸಮಸ್ಯೆ ಬಗೆಹರಿಸ ಬೇಕಿದೆ. ಅಲ್ಲದೆ, ಜನರು ತಮ್ಮ ಸಮೀಪದ ಯಾವುದೇ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಒದಗಿಸಬೇಕಿದೆ. ಸೇವಾ ಕೇಂದ್ರ ಸಿಬ್ಬಂದಿ ರಾತ್ರಿ ೮ರ ವರೆಗೂ ಕೆಲಸ ನಿರ್ವಹಿಸಲು ಸೂಚಿಸಬೇಕಿದೆ.
ಫಲಾನುಭವಿಗಳು ಮೊಬೈಲ್‌ಗೆ ಸಂದೇಶ ರವಾನಿಸುವ ಬದಲು ಜನರಿಗೆ ಅರ್ಜಿ ಸಲ್ಲಿಕೆಗೆ ಮುಕ್ತ ಅವಕಾಶ ಒದಗಿಸಬೇಕಿದೆ. ಫಲಾನುಭವಿಗಳ ಮನೆ ಬಾಗಿಲಿಗೇ ಹೋಗಿ ಅರ್ಜಿ ಸ್ವೀಕರಿಸಿದರೆ ಒಳ್ಳೆಯದು. ಅಲ್ಲದೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನಗದು ವರ್ಗಾವಣೆ ಸೌಲಭ್ಯ (ಡಿಬಿಟಿ)ಯ ಹಾಕುವ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ವಜಾ ಮಾಡಿ ಕೊಳ್ಳುವ ಸಾಧ್ಯತೆ ಇದ್ದು, ಆ ರೀತಿ ಮಾಡದಂತೆ ಬ್ಯಾಂಕ್‌ಗಳಿಗೆ ಸರಕಾರ ನಿರ್ದೇಶನ ನೀಡಬೇಕಿದೆ.