ರಾಜ್ಯದಲ್ಲಿ ಎರಡು ತಿಂಗಳ ಶೈಶವದಲ್ಲಿರುವ ಕಾಂಗ್ರೆಸ್ ಸರಕಾರ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಜಾರಿಯಲ್ಲಿ ವ್ಯಸ್ಥವಾಗಿದೆ. ಮೊದಲ ದಿನದಿಂದಲೂ ಸರಕಾರದ ಬಗೆಗಿದ್ದ ಏಕೈಕ ನಿರೀಕ್ಷೆ ಮತ್ತು ಪ್ರಶ್ನೆ ಗ್ಯಾರಂಟಿಗಳ ಅನುಷ್ಠಾನ ಸಾಧ್ಯವೇ? ಇದಕ್ಕೆ ದುಡ್ಡನ್ನು ಎಲ್ಲಿಂದ ತರುತ್ತಾರೆ? ಗ್ಯಾರಂಟಿಗಳ ಭಾರ ರಾಜ್ಯವನ್ನು ಆರ್ಥಿಕ ದಿವಾಳಿ ಯತ್ತ ಒಯ್ಯಲಿದೆಯೇ? ಮಾಧ್ಯಮಗಳೂ ಸೇರಿದಂತೆ ಪ್ರತಿಪಕ್ಷಗಳು ಹುಟ್ಟು ಹಾಕಿರುವ ಇಂಥದ್ದೊಂದು ಚರ್ಚೆ ಭರದಿಂದಲೇ ಸಾಗಿದೆ.
ಇವೆಲ್ಲದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿಯೇ ಗ್ಯಾರಂಟಿ ಜಾರಿಯ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಬಹು ಜಾಣ್ಮೆಯಿಂದ ಗ್ಯಾರಂಟಿ ಜಾರಿಗೆ ಮುಖ್ಯಮಂತ್ರಿಯವರು ಚಿಂತನ- ಮಂಥನ ನಡೆಸಿರುವುದು ಬಜೆಟ್‌ನಲ್ಲಿ ಕಂಡುಬರುತ್ತದೆ. ಇದು ಹೀಗೆಯೇ ಮುಂದುವರಿದಲ್ಲಿ ರಾಜ್ಯದ ಬೊಕ್ಕಸ ಬರಿದಾಗುವ, ಅಭಿವೃದ್ಧಿಗೆ ಹಿನ್ನಡೆ ಯಾಗುತ್ತದೆ ಎಂಬ ಯಾವ ಭೀತಿಯೂ ಬೇಕಿಲ್ಲ. ರಾಜ್ಯದ ಜನರಿಗೆ ನೆರವೀ ಯುವ ಸದಾಶಯದೊಂದಿಗೇ ಯೋಜನೆಗಳು ಜಾರಿಗೊಂಡಿದ್ದೇ ಆದಲ್ಲಿ, ಸಾಮಾಜಿಕ ಸಬಲೀಕರಣದ, ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಗ್ಯಾರಂಟಿಗಳು ನಿಲ್ಲುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.
ಬೆಲೆ ಏರಿಕೆಯ ದಿನಗಳಲ್ಲಿ ಕೆಳವರ್ಗದ ಜನರ ಬೆಂಬಲಕ್ಕೆ ಇವು ನಿಲ್ಲುತ್ತವೆ. ಮಾತ್ರವಲ್ಲ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಕೈ ಸೇರುವ ಹಣ ಸಹಜವಾಗಿ ಅವರ ಖರೀದಿ ಸಾಮರ್ಥ್ಯ ಹೆಚ್ಚಿಸುತ್ತದೆ. ಇದರಿಂದ ಮಾರುಕಟ್ಟೆ ಪುಣಶ್ಚೇತನಗೊಂಡು ಒಟ್ಟು ಆರ್ಥಿಕತೆ ಬೆಳವಣಿಗೆಗೆ ಕಾಣುತ್ತದೆಯೇ ವಿನಾ, ಆರ್ಥಿಕ ದುಃಸ್ಥಿತಿಗೆ ಗ್ಯಾರಂಟಿಗಳು ದಾರಿ ಮಾಡಿಕೊಡುವ ಸಂಭವನೀಯತೆ ಕಡಿಮೆ. ತೀರಾ ಸಂಕಷ್ಟದಲ್ಲಿರುವ ಮಂದಿಗೆ ತಕ್ಷಣದ ಪರಿಹಾರವಾಗಿ ಈ ಗ್ಯಾರಂಟಿ ಗಳು ಕೆಲಸ ಮಾಡುತ್ತವೆ. ಇದನ್ನು ಸಿಎಂ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ ಎಂದಿರುವುದು ಒಪ್ಪತಕ್ಕಂಥದ್ದೇ. ಮುಂಬರುವ ಲೋಕಸಭಾ ಹಾಗೂ ಉತ್ತರದ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಇದೇ ‘ಕರ್ನಾಟಕ ಮಾದರಿ’ ಎನಿಸಿಕೊಂಡು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿರುವುದೂ ಗಮನಾರ್ಹ.
ಯಾವುದೇ ಯೋಜನೆಗಳು ಜನಪರವಾಗಿದ್ದು, ದೂರದೃಷ್ಟಿಯ ಆಲೋಚನೆಗಳೊಂದಿಗೆ ಜಾರಿಗೊಂಡಲ್ಲಿನ ಖಂಡಿತಾ ವ್ಯತಿರಿಕ್ತ ಪರಿಣಾಮ ಬೀರದು. ಇದರ ಜತೆಜತೆಗೇ ರಾಜ್ಯದಲ್ಲಿ ಉದ್ಯಮ ಕ್ಷೇತ್ರದ ಪ್ರಗತಿ, ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿನ ಮುನ್ನಡೆ, ಮೂಲಸೌಲಭ್ಯಗಳು ವೃದ್ಧಿಯಾಗಬೇಕಿವೆ. ಗ್ಯಾರಂಟಿಗಳು ಸಹ,
ದುರುಪಯೋಗ, ಭ್ರಷ್ಟಾಚಾರಕ್ಕೆ ಎಡೆ ಮಾಡದೇ ಅರ್ಹ ಫಲಾನುಭವಿಗಳ ಕೈಸೇರಬೇಕು. ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಹಿಂದಿರುಗಿಸಿದಂತೆ,
ಅಗತ್ಯ ಇಲ್ಲದವರು ಗ್ಯಾರಂಟಿ ಸೌಲಭ್ಯಗಳನ್ನು ಬಿಟ್ಟಕೊಡುವ ಔದಾರ್ಯ ತೋರುವಂತಾಗಬೇಕಿದೆ.