Saturday, 14th December 2024

ಶಾಲೆ ಆರಂಭಕ್ಕೂ ಮುನ್ನ ಅತಿಥಿ ಶಿಕ್ಷಕರ ನೇಮಕವಾಗಲಿ

ಬೇಸಿಗೆ ರಜೆ ಕಳೆದು ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ಶಾಲೆಗಳು ಸಜ್ಜಾಗಿವೆ. ಇದೇ ೨೯ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಈ ನಡುವೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗಾಗಿ ಆಹ್ವಾನವನ್ನು ನಿರೀಕ್ಷಿಸುತ್ತ ಸಾವಿರಾರು ಅತಿಥಿ ಶಿಕ್ಷಕರು ಕಾಯುತ್ತಿದ್ದಾರೆ.

ಪ್ರತಿ ವರ್ಷ ಶಾಲೆ ಆರಂಭವಾಗುವ ಸಂದರ್ಭದಲ್ಲಿ ಶಿಕ್ಷಕರ ಕೊರತೆಯ ಲೆಕ್ಕಹಾಕಿ ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ ಶಿಕ್ಷಣ ಇಲಾಖೆಗೆ ಮಾಹಿತಿ ರವಾನಿಸ ಲಾಗುತ್ತಿದೆ. ಈ ಬಾರಿ ಈಗಾಗಲೇ ಮಾಹಿತಿ ಸಿಕ್ಕಿದ್ದರೂ ಅತಿಥಿ ಶಿಕ್ಷಕರ ನೇಮಕಾತಿ ವಿಳಂಬ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಬಾರಿ ತಡವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಪ್ರತಿ ವರ್ಷ ಒಂದಿಲ್ಲ ಒಂದು ಕಾರಣ ಹೇಳಿ ಅತಿಥಿಗಳ ಆಹ್ವಾನ ವಿಳಂಬ ಮಾಡಲಾಗುತ್ತದೆ.

ಕಳೆದ ಬಾರಿ ಎರಡು ತಿಂಗಳು ತಡವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಎರಡು ತಿಂಗಳ ಬೇಸಿಗೆ ರಜೆಯೂ ಸೇರಿ ಒಟ್ಟು ನಾಲ್ಕು ತಿಂಗಳು ಅತಿಥಿ ಶಿಕ್ಷಕರು ಸಂಪಾದನೆ ಇಲ್ಲದೇ ಕಾಲ ಕಳೆಯಬೇಕಾಯಿತು. ಈ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಶಾಲೆ ಶುರುವಾಗುವುದಕ್ಕೂ ಮುನ್ನವೇ ಅತಿಥಿ ಶಿಕ್ಷಕರ ನೇಮಕ ಮಾಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅತಿಥಿ ಶಿಕ್ಷಕರಿಗೆ ಎರಡು-ಮೂರು ತಿಂಗಳಿಗೆ ಸಂಭಾವನೆ ಕೊಡುವ ಬದಲು ಪ್ರತಿ ತಿಂಗಳು ಸಂಭಾವನೆ ಜಮೆ ಆಗುವಂತೆ ವ್ಯವಸ್ಥೆ ಜಾರಿಗೆ ತರಬೇಕು. ಅಲ್ಲದೆ, ವಿದ್ಯಾವಿಕಾಸ ಯೋಜನೆಯಡಿಯಲ್ಲಿ ೨೦೨೪-೨೫ನೇ ಸಾಲಿಗೆ ಶಾಲಾ ಮಕ್ಕಳಿಗೆ ಪೂರೈಕೆಯಾಗಿರುವ ಸಮವಸ ಬಟ್ಟೆಗಳೇ ಕಳಪೆಯಿಂದ ಕೂಡಿವೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿಯು ಈಗಾಗಲೇ ಹಲವು ಜಿಲ್ಲೆಗಳಿಗೆ ಪೂರೈಕೆಯಾಗಿರುವ ಸಮವಸ್ತ್ರ ಬಟ್ಟೆಗಳನ್ನು ತಿರಸ್ಕರಿಸಿದೆ.

ಸಮವಸ್ತ್ರ ಹೊಲಿಗೆ ವೆಚ್ಚವನ್ನೂ ಪೋಷಕರಿಂದಲೇ ಭರಿಸಿಕೊಂಡಿರುವ ಸರಕಾರವು ಇದೀಗ ಕಳಪೆ ಸಮವಸ್ತ್ರ ಪೂರೈಸುತ್ತಿರುವುದು ಸರಿಯಲ್ಲ. ಸದ್ಯ ಸರಬರಾಜಾಗಿರುವ ಸಮವಸ್ತ್ರಗಳು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೋದಾಮಿನಲ್ಲಿವೆ. ಈ ಸಮವಸ್ತ್ರಗಳ ಎಲ್ಲ ಬಟ್ಟೆಗಳನ್ನು ಮರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು.