ರಾಜ್ಯಾದ್ಯಂತ ಬರ ತಾಂಡವವಾಡುತ್ತಿದೆ. ನೀರಿಗೆ ಹಾಹಾಕಾರ ಉಂಟಾಗಿದೆ. ಇದೇ ವೇಳೆ ಬಿಸಿಲು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಫೆಬ್ರವರಿಯಿಂದ ಆರಂಭವಾಗಿರುವ ಈ ಬಿಸಿಲು ಜೂನ್ ಎರಡನೇ ವಾರದವರೆಗೂ ಮುಂದುವರಿಯುವ ನಿರೀಕ್ಷೆ ಇದೆ. ಅಂತರ್ಜಲವೂ ತಳಕ್ಕೆ ಕುಸಿದಿದ್ದು, ನಗರ ಪ್ರದೇಶವೂ ಸೇರಿದಂತೆ ಎಲ್ಲೆಡೆ ಪೂರೈಕೆಯಾಗುತ್ತಿರುವ ನೀರು ಬಹುತೇಕ ಜಲಮೂಲಗಳ ‘ಡೆಡ್ ಸ್ಟೋರೇಜ್’ನದ್ದು.
ಹೀಗಾಗಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಜತೆಗೆ ಬೇಸಿಗೆಯಲ್ಲಿ ಎಲ್ಲ ರೀತಿಯ ವೈರಸ್‌ಗಳೂ ಹಾಗೂ ರೋಗಕಾರಕ ಬ್ಯಾಕ್ಟೀರಿಯಾಗಳು ಹೆಚ್ಚು ವೇಗದಲ್ಲಿ ಪ್ರಸರಣಗೊಳ್ಳುತ್ತವೆ. ಇದರೊಂದಿಗೆ ಬಿಸಿಲಿನ ಅಬ್ಬರವೂ ಸೇರಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರನ್ನು ನಿತ್ರಾಣ, ಸೋಂಕು ಸಮಸ್ಯೆ ಸೇರಿ ಹಲವು ಅನಾರೋಗ್ಯ ಕಾಡುವುದು ಸಹಜ.
ಈಗಾಗಲೇ ಹವಾಮಾನ ಇಲಾಖೆ, ಮಾರ್ಚ್ ಕೊನೆಯ ವೇಳೆಗೆ ಸೂರ್ಯನ ಬಿಸಿಲು ಮತ್ತು ಶಾಖದ ಅಲೆಗಳು ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.
ಜತೆಗೆ ಚುನಾವಣೆ ಸಹ ಎದುರಾಗುತ್ತಿದ್ದು, ಪ್ರಚಾರ ಸಭೆಗಳಂಥ ಸಾರ್ವಜನಿಕ ಸಮಾವೇಶಗಳು ಹೆಚ್ಚಲಿವೆ. ಜನದಟ್ಟಣೆಯ ಕಡೆ ಸೋಂಕು ಹರಡುವುದು
ಸಹಜ. ಜತೆಗೆ ಬಯಲು ಪ್ರದೇಶದಲ್ಲಿ ಸೂರ್ಯನ ಶಾಖದ ಪ್ರಖರತೆಯಿಂದ ಡಿಹೈಡ್ರೇಷನ್, ಸನ್ ಸ್ಟ್ರೋಕ್, ವಿಪರೀತ ತಲೆನೋವು ಸೇರಿದಂತೆ ಅನೇಕ
ಕಾಯಿಲೆಗಳು ಕಾಡುತ್ತವೆ. ಅದಕ್ಕಾಗಿಯೇ ಅನೇಕ ವೈದ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೆಗಳನ್ನು ನೀಡುತ್ತಿzರೆ. ಅವುಗಳನ್ನು ಪಾಲಿಸುವುದು
ಆದ್ಯತೆಯಾಗಬೇಕು. ಸಾಧ್ಯವಾದಷ್ಟು ವೃದ್ಧರು, ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದೊಳಿತು. ಹೆಚ್ಚು ಹೆಚ್ಚು ನೀರು ಕುಡಿಯು ವಂತೆ ನೋಡಿಕೊಳ್ಳಬೇಕು.
ವಿಟಮಿನ್ ’ಸಿ’ ಹೆಚ್ಚಿರುವ ಹಣ್ಣು, ಆಹಾರಗಳನ್ನು ಸೇವಿಸಬೇಕು. ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ತಣ್ಣಿರು ಬಟ್ಟೆಯಿಂದ ಆಗಾಗ ದೇಹವನ್ನು ಒರೆಸಿ, ಉಷ್ಣಾಂಶದ ಸಮತೋಲನ ಕಾಪಾಡಿಕೊಳ್ಳಬೇಕು. ಸಾಮಾಜಿಕ ಆರೋಗ್ಯಕ್ಕೆ ವೈಯಕ್ತಿಕ ಆರೋಗ್ಯ ಮುಖ್ಯ ಎಂಬುದು ನೆನಪಿನಲ್ಲಿರಲಿ.