ಅತ್ತ ಶ್ರೀಲಂಕಾದಲ್ಲ ಆರ್ಥಿಕ ಸ್ಥಿತಿ ಹದಗೆಟ್ಟು, ನಾಗರಿಕ ಯುದ್ಧವಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ. ಇತ್ತ ಪಾಕಿಸ್ತಾನದ ಸ್ಥಿತಿಯೂ ಭಿನ್ನವಾಗೇನೂ ಇಲ್ಲ. ನಮ್ಮ ಭುಜದ ಮೇಲೆ ಕುಳಿತ ಚೀನಾದಲ್ಲೂ ಇತ್ತಿಚೆಗೆ ಅಲ್ಲಲ್ಲಿ ಜನ ಬಂಡೇಳುತ್ತಿದ್ದಾರೆ.
ಆ ದೇಶದಲ್ಲೂ ಆರ್ಥಿಕ ದಿವಾಳಿತನದ ಸುಳಿವು ಕಾಣುತ್ತಿದೆ. ಇವೆಲ್ಲದರ ನಡುವೆ ಭಾರತಕ್ಕೂ ಇದೇ ಗತಿ ಬರುತ್ತೆ ಎಂದು ಹಲವರು ಶಂಕಿಸಿದ್ದಾರೆ, ಅಥವಾ ಆತಂಕ ಪಡುತ್ತಿದ್ದಾರೆ. ವಾಸ್ತವವಾಗಿ ಅವಲೋಕಿಸಿದರೆ ಸದ್ಯದ ಮಟ್ಟಿಗಂತೂ ಭಾರತಕ್ಕೆ ಅಂಥ ಅಪಾಯ ಕಾಣುತ್ತಿಲ್ಲ. ಕೋವಿಡ್ ವೇಳೆ ತೀರಾ ನೆಲಕಚ್ಚಿದ್ದ ಭಾರತದ ಆರ್ಥಿಕತೆ ಈಗ ನಿರೀಕ್ಷಿತ ರೀತಿಯಲ್ಲಿ ಚೇತರಿಕೆ ಕಂಡಿದೆ.
ಹಲವು ದೇಶಗಳಿಗೆ ಹೋಲಿಸಿದರೆ ಜಿಡಿಪಿ ಬೆಳವಣಿಗೆ ದರ ಸದ್ಯ ತುಸು ಕಡಿಮೆ ಇದೆಯಾದರೂ ಮುಂದಿನ ದಿನಗಳಲ್ಲಿ ಜಿಡಿಪಿ ದರ ಉತ್ತಮ ಸ್ಥಿತಿಗೆ ಬರುವ ನಿರೀಕ್ಷೆ ಇದೆ.
ಭಾರತದಲ್ಲಿ -ರೆಕ್ಸ್ ಮೀಸಲು ನಿಧಿ 600 ಬಿಲಿಯನ್ ಡಾಲರ್ ಇದೆ. ಅಂದರೆ ಇಡೀ ಒಂದು ವರ್ಷ ನಾವು ಆಮದು ಮಾಡಿಕೊಳ್ಳಲು ಸಾಕಾಗುವಷ್ಟು ಹಣ ನಮ್ಮಲ್ಲಿದೆ. 2013ಕ್ಕೆ ಹೋಲಿಸಿದರೆ ವಿದೇಶೀ ಸಾಲದ ಪ್ರಮಾಣ ಶೇ.50ರಷ್ಟು ಹೆಚ್ಚಿದ್ದರೂ ಜಿಡಿಪಿ ಏರಿಕೆಯನ್ನು ಪರಿಗಣಿಸಿ ದರೆ ಆತಂಕ ಇಲ್ಲ.
ಇನ್ನು ಆರ್‌ಬಿಐ ನಿಗದಿಪಡಿಸಿದ್ದ ಶೇ.6 ಹಣದುಬ್ಬರ ದಾಟಿ ಸುಮಾರು ಶೇ.7ಕ್ಕೆ ತಲುಪಿದ್ದರೂ ಬೇರೆ ದೇಶಗಳಿಗೆ ಹೋಲಿಸಿ ದರೆ ನಾವು ಎಷ್ಟೋ ಪಾಲು ವಾಸಿ. ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದರಿಂದ ಆದಾಯಕ್ಕೆ ಕತ್ತರಿಬಿದ್ದಿದೆ ನಿಜ. ಉಕ್ರೇನ್ ಯುದ್ಧವೂ ಇದಕ್ಕೆ ಕಾರಣ. ಇವೆಲ್ಲದರ ನಡುವೆಯೂ ಭಾರತದಲ್ಲಿ ತಕ್ಕಮಟ್ಟಿಗೆ ಹಣದುಬ್ಬರ ಕೈಮೀರಿ ಹೋಗದಂತೆ ಎಚ್ಚರ ವಹಿಸಲಾಗಿದೆ.
ಡಾಲರ್ ಬೆಲೆ ಈಗ ೭೯.೬೬ ರು.ಗೆ ಕುಸಿದಿದೆಯಾದರೂ ವಾಸ್ತವದಲ್ಲಿ ಡಾಲರ್ ಮೌಲ್ಯ ಗಣನೀಯವಾಗಿ ವೃದ್ಧಿಯಾಗಿರು ವುದು ಇದಕ್ಕೆ ಕಾರಣ. ಆದರೆ ಬೇರೆ ಪ್ರಮುಖ ಕರೆನ್ಸಿಗಳಾದ ಬ್ರಿಟನ್ ಪೌಂಡ್, ಯೂರೋ ಮೊದಲಾದವುಗಳ ಎದುರು ರೂಪಾಯಿ ಮೌಲ್ಯವೃದ್ಧಿಸಿಕೊಂಡಿದೆ ಎಂಬುದು ಗಮನಾರ್ಹ. ಹೇಗೇ ನೋಡಿದರೂ ನಾವು ಸುಸ್ಥಿತಿಯಲ್ಲಿದ್ದೇವೆ. ರಾಜ್ಯಗಳ ಮಧ್ಯೆ ಆರೋಗ್ಯಯುತ ಸ್ಪರ್ಧೆ ಇದೆ. ಹೂಡಿಕೆದಾರರನ್ನು ಒಲಿಸಿಕೊಳ್ಳುತ್ತಿದ್ದೇವೆ.
ವ್ಯವಹಾರಕ್ಕೆ ಪೂರಕವಾದ ವಾತಾವರಣ ಇದೆ. ಇವೆಲ್ಲ ದೀರ್ಘಕಾಲದಲ್ಲಿ ಆರ್ಥಿಕತೆಯ ಬುಡ ಗಟ್ಟಿಗೊಳಿಸಲು ಸಹಕಾರಿ.