ಕರೋನಾದಿಂದಾಗಿ ಹಲವಾರು ದೇಶಗಳು ಕಂಗೆಟ್ಟ ಸಂದರ್ಭದಲ್ಲಿ ಭಾರತ ಅನುಸರಿಸಿದ ನಡೆ ಇದೀಗ ಇತರ ದೇಶಗಳಿಗಿಂತಲೂ ಮಹತ್ವ ಪಡೆಯತೊಡಗಿದೆ. ಎಲ್ಲ ದೇಶಗಳು ಕರೋನಾ ಸ್ಥಿತಿಯನ್ನು ನಿಭಾಯಿಸುವಲ್ಲಿ ಹರಸಾಹಸಪಡುತ್ತಿರುವ ದಿನಗಳಲ್ಲಿ ಭಾರತ ಗಮನ ಸೆಳೆಯಲು ಮುಖ್ಯಕಾರಣ ಆರ್ಥಿಕ ಚೇತರಿಕೆ ಹಾಗೂ ವ್ಯಾಕ್ಸೀನ್ ಅಭಿಯಾನದಲ್ಲಿನ ಸಾಧನೆ.
೨೦೨೧ರಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ಆರ್ಥಿಕತೆಯಾಗಲಿದೆ ಭಾರತ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತನ್ನ ಇತ್ತೀಚಿನ ವರದಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ. ಅದೇ ರೀತಿ ಭಾರತದ ಆರ್ಥಿಕ ಬೆಳವಣಿಗೆ ಚೀನಾವನ್ನೂ ಮೀರಿಸಲಿರುವುದಾಗಿ ತಿಳಿಸಿದೆ. ಒಟ್ಟಾರೆ ಭಾರತವು ಅನೇಕ ಸಂಕಷ್ಟಗಳನ್ನು ಮೀರಿ ಆರ್ಥಿಕತೆಯ ಪ್ರಗತಿಯಲ್ಲಿ ಸುಧಾರಣೆ ಕಂಡು ಇತರ ದೇಶಗಳು ಗಮನಿಸುವಂತೆ ಮಹತ್ವ ಪಡೆದಿರುವುದು ಉತ್ತಮ ಬೆಳವಣಿಗೆ ಜತೆಗೆ ಇದೀಗ ಲಸಿಕೆ ಅಭಿಯಾನದ ಮೂಲಕವೂ ಮಹತ್ವದನ್ನು ಸಾಧಿಸಿದೆ.
ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ನೀಡುವ ಮೂಲಕ ಅಮೆರಿಕದ ಸಾಧನೆಯನ್ನು ಮೀರಿಸಿದೆ ಭಾರತ. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತ 32,36,63,297 ಡೋಸ್‌ಗಳನ್ನು ನೀಡಿದ್ದರೆ, ಅಮೆರಿಕ 32,33,27,328 ಡೋಸ್ ಲಸಿಕೆಗಳನ್ನು ನೀಡಿದೆ. ಭಾರತಕ್ಕಿಂತ ಮೊದಲೇ ಅಮೆರಿಕ ಲಸಿಕೆ ಅಭಿಯಾನ ಆರಂಭಿಸಿದರೂ ಭಾರತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಸಿಕೆ ವಿತರಣೆಯಿಂದ ಇತರ ರಾಷ್ಟ್ರಗಳ ಗಮನಸೆಳೆದಿದೆ. ಈ ರೀತಿ ಆರ್ಥಿಕ ಚೇತರಿಕೆ ಹಾಗೂ ಲಸಿಕೆ ಅಭಿಯಾನದ ಮೂಲಕ ಸಾಧನೆ ತೋರಿರುವ ಭಾರತದ ನಡೆ ಹಲವು ದೇಶಗಳ ಗಮನ ಸೆಳೆಯುತ್ತಿರುವುದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ.