ಅಭಿವೃದ್ಧಿ, ಪ್ರಜಾಕಲ್ಯಾಣ, ಸಮಾಜಸೇವೆ, ಜನಹಿತ ಚಿಂತನೆ ಹೀಗೆ ನಮ್ಮ ರಾಜಕಾರಣಿಗಳು ತಮ್ಮ ಕಾರ್ಯಚಟುವಟಿಕೆಗಳಿಗೆ ಏನೇ ಹಣೆಪಟ್ಟಿಯನ್ನು ಲಗತ್ತಿಸಲಿ, ಅಂತಿಮವಾಗಿ ಅದು ಬಂದು ನಿಲ್ಲುವುದು ‘ಅಧಿಕಾರ ರಾಜಕಾರಣ’ ಎಂಬ ಛತ್ರಛಾಯೆಯಡಿಯೇ ಎಂಬುದು ಹಸಿಮಣ್ಣಿನ ಮೇಲೆ ಗಾಜಿನ ಚೂರಿನಿಂದ ಬರೆದ ಬರಹದಷ್ಟೇ ಸತ್ಯ. ಈ ಗ್ರಹಿಕೆಯ ಮರುನೆನಕೆಗೆ ಕಾರಣವಾಗಿರುವುದು ನಮ್ಮ ತಥಾಕಥಿತ ವಿಪಕ್ಷಗಳ ಮೈತ್ರಿಕೂಟದ ನವರಂಗಿ ಆಟ.
ಪ್ರಧಾನಿ ಮೋದಿಯವರನ್ನು ಹಣಿಯುವ ‘ಒಂದಂಶದ ಕಾರ್ಯಸೂಚಿ’ಯೊಂದಿಗೆ ಹುಟ್ಟಿಕೊಂಡಿದ್ದು ಬಿಜೆಪಿಯೇತರ ಪಕ್ಷಗಳ ‘ಇಂಡಿಯ’ ಮೈತ್ರಿಕೂಟ. ಇದರ ಸಹಭಾಗಿ ಪಕ್ಷಗಳ ನಾಯಕರಲ್ಲಿ ಕೆಲವರ ಧೋರಣೆ-ದುಂಡಾವರ್ತನೆಗಳನ್ನು ಸಾಕಷ್ಟು ಮೊದಲೇ ಅಳೆದು ತೂಗಿದ್ದ ರಾಜಕೀಯ ವಿಶ್ಲೇಷಕರು, ‘ಈ ಕೂಡಿಕೆ ಬಹಳ ದಿನ ಬಾಳಿಕೆ ಬರುವುದಿಲ್ಲ ಬಿಡಿ’ ಎಂಬ ಭರತವಾಕ್ಯವನ್ನು ನುಡಿದಿದ್ದುಂಟು. ಇಷ್ಟಾಗಿಯೂ ಪಟನಾ, ಬೆಂಗಳೂರು ಹೀಗೆ ವಿಭಿನ್ನ ತಾಣಗಳಲ್ಲಿ ‘ಇಂಡಿಯ’ ಮೈತ್ರಿಕೂಟದ ಸಭೆಗಳು ನಡೆದು ಒಗ್ಗಟ್ಟಿನ ಪ್ರದರ್ಶನವಾದಾಗ, ವಿಪಕ್ಷಗಳು ಈ ಬಾರಿ ತಮ್ಮ ಕಾರ್ಯಸೂಚಿಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ ಎನಿಸಿದ್ದು ನಿಜ.
ಆದರೆ ದಿನಗಳೆದಂತೆ ಅದರ ಒಂದೊಂದೇ ಬಣ್ಣಗಳು ಬಯಲಾಗುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲಿ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಶುರುವಾಗಿರುವ ಜಟಾಪಟಿ ಇದಕ್ಕೊಂದು ಸ್ಯಾಂಪಲ್ ಅಷ್ಟೇ. ಮಿಕ್ಕಂತೆ ಆಮ್ ಆದ್ಮಿ ಪಕ್ಷವಾಗಲೀ, ತಾನು ಮರಾಠಿಗರ ಅಸ್ಮಿತೆ ಎಂದು ಹೇಳಿಕೊಳ್ಳುವ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷವಾಗಲೀ ಮೈತ್ರಿಕೂಟದಲ್ಲಿ ಬಲವಂತವಾಗಿ ಗುರುತಿಸಿಕೊಂಡಂತೆ ವರ್ತಿಸುತ್ತಿವೆ. ದೆಹಲಿಯ ರಾಜಕಾರಣದಲ್ಲಿ ‘ಹಾವು-ಮುಂಗುಸಿ’ಗಳಂತೆ ಕಿತ್ತಾಡುವ ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಕೈಜೋಡಿಸುವುದನ್ನು ಊಹಿಸಿಕೊಳ್ಳಲಿಕ್ಕೂ ಕಷ್ಟ! ಒಟ್ಟಿನಲ್ಲಿ, ಪ್ರಜಾ ಪ್ರಭುತ್ವದಲ್ಲಿ ಗಟ್ಟಿಯಾದ ಆಡಳಿತ ಪಕ್ಷದಂತೆ ಸಮರ್ಥ ವಿಪಕ್ಷವೂ ಇರಬೇಕು ಎಂಬ ಗ್ರಹಿಕೆಯನ್ನು ಸಾಬೀತುಪಡಿಸುವ ಲಕ್ಷಣಗಳಿದ್ದ ಮೈತ್ರಿಕೂಟವೊಂದು ದಿನಗಳೆದಂತೆ ದುರ್ಬಲವಾಗುತ್ತಿರುವಂತಿದೆ.