Friday, 13th December 2024

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ

ರಷ್ಯಾದ ಅತಿಕ್ರಮಣಕ್ಕೆ ಗುರಿಯಾಗಿರುವ ಉಕ್ರೇನ್‌ನಲ್ಲಿ 15000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿzರೆ. ಇವರ ಮೇಲೆ
ಉಕ್ರೇನ್‌ನ ಸೈನಿಕರು ಮತ್ತು ನಾಗರಿಕರು ಮನಬಂದಂತೆ ಹಲ್ಲೆ ಮಾಡುತ್ತಿದ್ದಾರೆ ಎಂದು ಅಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ಅತಿಕ್ರಮಣದ ವಿಚಾರದಲ್ಲಿ ಭಾರತ ಸರಕಾರವು ತಟಸ್ಥ ನೀತಿಯ ಮೊರೆ ಹೋಗಿರುವುದೇ ಈ ರೀತಿ ಹಲ್ಲೆ ಮಾಡಲು ಕಾರಣ ಎನ್ನಲಾಗಿದೆ. ಇನ್ನೊಂದೆಡೆ ರಷ್ಯಾವನ್ನು ಬೆಂಬಲಿಸಿಲ್ಲ ಎಂದು ರಷ್ಯಾ ಸೈನಿಕರು ಕೂಡ ಭಾರತೀಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ತೆರವು ಮಾಡಲು ಭಾರತ ಸರಕಾರವು ಗರಿಷ್ಠ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳುತ್ತಿದೆ.

ಆದರೆ ಅಲ್ಲಿನ ವಾಸ್ತವವೇ ಬೇರೆ ಇದೆ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಹರಿಬಿಟ್ಟಿರುವ ವಿಡಿಯೊಗಳಿಂದ ಬಹಿರಂಗವಾಗಿದೆ. ಬೇರೆ ದೇಶಗಳ ವಿದ್ಯಾರ್ಥಿಗಳನ್ನು ಗೌರವಯುತ ವಾಗಿ ಗಡಿ ದಾಟಿಸಲಾಗುತ್ತಿದೆ. ಆದರೆ ಭಾರತದ ವಿದ್ಯಾರ್ಥಿಗಳನ್ನು ಮಾತ್ರ ಬಿಡುತ್ತಿಲ್ಲ. ಅವರಿಗೆ ನೀರು, ಆಹಾರ ಏನೂ ಪೂರೈಕೆ ಆಗುತ್ತಿಲ್ಲ. ಅಲ್ಲಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ನಮ್ಮ ರಾಯಭಾರ ಕಚೇರಿಯ ಒಬ್ಬ ಸಿಬ್ಬಂದಿಯೂ ಇಲ್ಲ ಎನ್ನಲಾ ಗಿದೆ. ಹಾಗಾದರೆ ಸರಕಾರ ಹೇಳುವುದೆಲ್ಲವೂ ಸುಳ್ಳಾ ಎಂಬ ಸಂಶಯ ಬರುತ್ತಿದೆ.

ಯುದ್ಧ ನಡೆಯುವ ಬಗ್ಗೆ ತಿಂಗಳ ಹಿಂದೆಯೇ ಸೂಚನೆ ದೊರೆತಿದ್ದರೂ ಬೇರೆ ದೇಶಗಳು ಉಕ್ರೇನ್‌ನಿಂದ ತಮ್ಮ ವಿದ್ಯಾರ್ಥಿಗಳನ್ನು ಯುದ್ಧ
ಆರಂಭವಾಗುವ ಮುನ್ನವೇ ತೆರವು ಮಾಡಿವೆ. ಆದರೆ, ಭಾರತ ಮಾತ್ರ ಏನೂ ಮಾಡದೇ ಇದ್ದದ್ದು ದುರಂತ. ಇಂಥ ಸಂದರ್ಭದಲ್ಲಿ ಭಾರತ ಸರಕಾರವು ಇನ್ನಷ್ಟು ಕಾಳಜಿ, ಶ್ರಮ ವಹಿಸಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಣೆ ಮಾಡಬೇಕಿದೆ. ಹಾಗೆಯೇ ವಿಶ್ವಸಂಸ್ಥೆಯು ಕೂಡ ಮಧ್ಯೆ ಪ್ರವೇಶಿಸಿ ಶಾಂತಿ ಪಾಲನೆಗೆ ಕ್ರಮ ಕೈಗೊಳ್ಳಬೇಕಿದೆ.