Saturday, 14th December 2024

ರೈಲ್ವೆ ನೆಟ್‌ವರ್ಕ್ ಬೆಳೆದ ದಾರಿ ಭಾರತೀಯರಿಗೆ ಹೆಮ್ಮೆ

railway job news

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ತಮ್ಮ ಎಕ್ಸ್ ಖಾತೆಯಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಫೋಟೊಗಳನ್ನು ಅಪ್‌ ಲೋಡ್ ಮಾಡಿದ್ದು, ೨೦೨೪ರ ಮಾರ್ಚ್‌ನಲ್ಲಿ ಸ್ಲೀಪರ್ ರೈಲುಗಳ ಸಂಚಾರ ಆರಂಭವಾಗುವ ಮುನ್ಸೂಚನೆ ನೀಡಿದ್ದಾರೆ.

ಈಗಾಗಲೇ ದೇಶದ ಹಲವೆಡೆ ಆರಂಭವಾಗಿರುವ ವಂದೇ ಭಾರತ್ ರೈಲು ವೇಗ ಮತ್ತು ಅತ್ಯಾಧುನಿಕ ಸೌಕರ್ಯ ಗಳಿಂದ ಪ್ರಯಾಣಿಕರ ಮನ ಗೆಲ್ಲುತ್ತಿದೆ. ಒಂದು ನಗರದಿಂದ ಮತ್ತೊಂದು ನಗರಕ್ಕೆ ಅತ್ಯಂತ ಕಡಿಮೆ ಸಮಯ ದಲ್ಲಿ ತಲುಪುವ ನಿಟ್ಟಿನಲ್ಲಿ ವಂದೇ ಭಾರತ್ ರೈಲುಗಳು ವರವಾಗಿ ಪರಿಣಮಿಸಿವೆ. ಕರ್ನಾಟಕದಲ್ಲಿ ಈಗಾಗಲೇ ಚೆನ್ನೈ-ಬೆಂಗಳೂರು- ಮೈಸೂರು ಮತ್ತು ಬೆಂಗಳೂರು-ಧಾರವಾಡ ರೈಲುಗಳು ಜನಪ್ರಿಯತೆ ಪಡೆದಿವೆ. ವಂದೇ ಭಾರತ್ ಸ್ಲೀಪರ್ ಕೋಚ್ ಕೂಡ ಈ ಸಾಲಿಗೆ ಸೇರುವ ದಿನಗಳು ದೂರವಿಲ್ಲ. ಉಗಿ ಬಂಡಿಯಿಂದ ಆರಂಭವಾದ ಭಾರತೀಯ ರೈಲ್ವೆ ನೆಟ್ ವರ್ಕ್ ಇಂದು ವಂದೇ ಭಾರತದಂತಹ ಅತ್ಯಾಧುನಿಕ ರೈಲುಗಳ ತನಕ ಸಾಗಿ ಬಂದಿರುವ ಹಾದಿ ಭಾರತೀಯರು ಹೆಮ್ಮೆ ಪಡುವಂಥದ್ದು.

ಭಾರತದಲ್ಲಿ ನಿತ್ಯ ೨೨,೫೯೩ ರೈಲುಗಳು ಸಂಚರಿಸುತ್ತವೆ. ನಿತ್ಯ ದೇಶದ ಸುಮಾರು ೨.೫ ಕೋಟಿ ಜನ ರೈಲು ಗಳನ್ನೇ ಅವಲಂಬಿಸಿದ್ದಾರೆ. ಈ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲ ಹೊಂದಿರುವ ದೇಶ ಎಂಬ ಖ್ಯಾತಿ ಗಳಿಸಿದೆ. ಈ ನಡುವೆ, ವಂದೇ ಭಾರತ್ ರೈಲು ಅತಿ ದುಬಾರಿ ಎಂಬ ದೂರಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕು. ಹಾಗೆಯೇ, ಇತ್ತೀಚಿನ ದಿನಗಳಲ್ಲಿ ರೈಲು ಬೋಗಿಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಲು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇಂಥದೊಂದು ಚೆಂದದ ರೈಲಿನೊಳಗೆ ಕಸ ಕಡ್ಡಿ ಎಸೆದು ಗಲೀಜು ಮಾಡುವ ಪ್ರಯಾಣಿಕರಿಗೇನೂ ಕೊರತೆ ಇಲ್ಲ.

ಸರಕಾರವೇನೋ ನಮ್ಮ ಅನುಕೂಲಕ್ಕಾಗಿ ವಂದೇ ಭಾರತದಂತಹ ರೈಲು ವ್ಯವಸ್ಥೆ ರೂಪಿಸುತ್ತದೆ. ಅವುಗಳ ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ, ಅವುಗಳನ್ನು ಹಾಳುಗೆಡವದಿರುವುದು, ಸ್ವಚ್ಛತೆ ಕಾಪಾಡುವುದು ಜವಾಬ್ದಾರಿಯುತ ನಾಗರಿಕರಾದ ನಮ್ಮ ಕರ್ತವ್ಯ ಎನ್ನುವುದನ್ನು ಮರೆಯಬಾರದು.