Friday, 13th December 2024

ಭಾರತಕ್ಕೆ ಪ್ರಜ್ವಲ್, ಸೂಕ್ತ ತನಿಖೆಯಾಗಲಿ

ಸುಮಾರು ಒಂದೂವರೆ ತಿಂಗಳ ಬಳಿಕ ಹಾಸನ ಸಂಸದ ಹಾಗೂ ಪೆನ್ ಡ್ರೈವ್ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಇಷ್ಟು ದಿನಗಳ ಕಾಲ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್, ಗುರುವಾರ ಮಧ್ಯರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಲಿದ್ದು, ಅಲ್ಲೇ ಎಸ್‌ಐಟಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳೂ ಹೆಚ್ಚಾಗಿವೆ.

ತಾನೇ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಹೇಳಿದರೂ, ಎಸ್‌ಐಟಿ ಅಧಿಕಾರಿಗಳು ಅದಕ್ಕೂ ಮುನ್ನವೇ ಪ್ರಜ್ವಲ್‌ರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಭಾರತಕ್ಕೆ ಬಂದ ತಕ್ಷಣವೇ ಅವರು ಬಂಧನಕ್ಕೊಳಗಾಗಬಹುದು. ಈಗ ಪ್ರಜ್ವಲ್ ರೇವಣ್ಣ ವಾಪಸ್ ಬರುತ್ತಿರುವು ಎಸ್‌ಐಟಿ ಪಾಲಿಗೆ ದೊಡ್ಡ ಜಯವೇ ಸರಿ. ಒಂದೂವರೆ ತಿಂಗಳಿನಿಂದಲೂ ಈ ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅವರಿಗೆ ಪ್ರಮುಖ ಆರೋಪಿ ಸಿಗದೇ ಇದ್ದುದು ದೊಡ್ಡ ಹಿನ್ನಡೆಯಾಗಿತ್ತು. ಈಗ ಪ್ರಜ್ವಲ್ ವಾಪಸ್ ಬರುತ್ತಿರುವುದರಿಂದ ತನಿಖೆ ವಿಚಾರದಲ್ಲಿ ಸಾಕಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ.

ಇನ್ನು ಪ್ರಜ್ವಲ್ ಪ್ರಕರಣದ ವಿಚಾರದಲ್ಲಿ ಎಸ್‌ಐಟಿ ಯಾರ ಮುಲಾಜಿಗೂ ಒಳಗಾಗದೇ ತನಿಖೆ ನಡೆಸಬೇಕಾಗಿದೆ. ಈ ಪ್ರಕರಣದಲ್ಲಿ ಹಲವಾರು ಮಹಿಳೆ ಯರು ಸಂತ್ರಸ್ತರಾಗಿದ್ದಾರೆ. ಇವರಿಗೆಲ್ಲಾ ನ್ಯಾಯ ಕೊಡಿಸುವ ಜವಾಬ್ದಾರಿ ಎಸ್‌ಐಟಿ ಮೇಲಿದೆ. ರಾಜಕೀಯ ಒತ್ತಡಕ್ಕೆ ಮಣಿದೋ ಅಥವಾ ಇನ್ನಾವುದೋ ಪ್ರಭಾವಕ್ಕೆ ಮಣಿದು, ಪ್ರಕರಣವನ್ನು ಸೂಕ್ತ ಅಂತ್ಯಕ್ಕೆ ತೆಗೆದುಕೊಂಡು ಹೋಗದೇ ಇದ್ದರೆ ಸಂತ್ರಸ್ತ ಮಹಿಳೆಯರಿಗೆ ಮಾಡಿದ ದ್ರೋಹ ವಾಗುತ್ತದೆ.

ಸದ್ಯ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಎಸ್‌ಐಟಿ ಮುಂದೆ ತಮಗಾಗಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂಥ ಹಲವಾರು ಮಹಿಳೆ ಯರು ಸಮಾಜಕ್ಕೆ ಅಂಜಿಕೊಂಡು ಬಾಯಿ ಬಿಡದೇ ಇರುವ ಸನ್ನಿವೇಶಗಳೂ ಇವೆ. ಇಂಥ ಹೊತ್ತಿನಲ್ಲಿ ಪ್ರಜ್ವಲ್ ರೇವಣ್ಣ ಕಡೆಯಿಂದಲೇ ಸಂತ್ರಸ್ತ ಮಹಿಳೆಯರ ಹೆಸರುಗಳನ್ನು ಬಾಯಿಬಿಡಿಸಿ ಅವರಿಗೆ ನ್ಯಾಯ ಕೊಡಿಸುವ ಹೊಣೆಗಾರಿಕೆಯೂ ಎಸ್‌ಐಟಿಗೆ ಇದೆ. ಲೈಂಗಿಕ ಹಗರಣಗಳು ಸಮಾಜಕ್ಕೆ ಅಂಟಿದ ಶಾಪಗಳಿದ್ದಂತೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಆಸ್ತಿ ರೀತಿ ನೋಡುವಾಗ ಇಂಥ ಪ್ರಕರಣಗಳಾಗುತ್ತವೆ.

ಪ್ರಜ್ವಲ್ ವಿಚಾರದಲ್ಲಿ ಕರ್ನಾಟಕ ಮತ್ತು ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗಿದೆ ಎಂಬುದು ಸತ್ಯ. ಪ್ರಜ್ವಲ್‌ಗೆ ಸೂಕ್ತ ಶಿಕ್ಷೆ ಕೊಡಿಸಿದರೆ, ಮುಂದಿನ ದಿನಗಳಲ್ಲಿ ಅಽಕಾರದ ಮದದಲ್ಲಿ ತಪ್ಪೆಸಗುವ ರಾಜಕಾರಣಿಗಳಿಗೆ ಪಾಠ ಕಲಿಸಿದಂತೆ ಆಗುತ್ತದೆ.