ಕಳೆದ ಮೂರು ದಿನಗಳಲ್ಲಿ ದೇಶಾದ್ಯಂತ 47 ಕಡೆ ನಡೆದ ಐ.ಟಿ ದಾಳಿಯಲ್ಲಿ ಬರೋಬ್ಬರಿ 750 ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ವ್ಯಕ್ತಿಗಳ ಜತೆಗೆ ನಂಟು ಹೊಂದಿದವರೇ ಆಗಿದ್ದಾರೆ ಎಂಬುದನ್ನು ಐ.ಟಿ. ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿ ಸಲವೂ ಐ.ಟಿ ದಾಳಿ ನಡೆದಾಗಲೆಲ್ಲಾ ಆಡಳಿತ ಪಕ್ಷದವರ ಪಿತೂರಿ ಎಂಬ ಮಾತುಗಳು ಕೇಳಿಬರುತ್ತವೆ. ರಾಜಕೀಯವಾಗಿ ಹಣಿಯಲು ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ದಾಳವಾಗಿ ಬಳಸಿಕೊಳ್ಳುತ್ತವೆ ಎಂದು ಆರೋಪ ಮಾಡುವುದು ಸಾಮಾನ್ಯವಾಗಿದೆ. ಐ.ಟಿ., ಇ.ಡಿ ಅಧಿಕಾರಿಗಳು ತಮ್ಮ ಶ್ರಮದಿಂದ ಮಾಹಿತಿ ಸಂಗ್ರಹಿಸಿ ತೆರಿಗೆ ವಂಚಕರನ್ನು ಬಲೆಗೆ ಹಾಕಿದರೂ ಅದಕ್ಕೆ ರಾಜಕೀಯ ಬಣ್ಣ ಬಳಿಯುವುದು ರೂಢಿಯಾಗಿದೆ. ಪ್ರತಿ ಬಾರಿಯೂ ಈ ತರ ಆರೋಪ ಗಳನ್ನು ಮಾಡುವುದರಿಂದ ತನಿಖಾ ಸಂಸ್ಥೆಗಳನ್ನು ಕುಗ್ಗಿಸುವ ಪ್ರಯತ್ನಗಳು ಆಗುತ್ತಿವೆ.
ರಾಜಕೀಯ ವ್ಯಕ್ತಿಗಳ ವಿರುದ್ಧದ ವೈಷಮ್ಯದಿಂದಲೂ ಮಾಹಿತಿ ಬರಬಹುದು. ಆದರೆ, ಅಂತಿಮವಾಗಿ ಮಾಹಿತಿಯ ಸ್ವರೂಪ, ಖಚಿತತೆ, ತೆರಿಗೆ ವಂಚನೆ ಸಾಧ್ಯತೆ ಕುರಿತ ಸತ್ಯಾಸತ್ಯತೆಯನ್ನು ಇಲಾಖೆ ಅಧಿಕಾರಿಗಳು ತನ್ನದೇ ವಿಧಾನದಿಂದ, ಮೂಲದಿಂದ ತನಿಖೆ ನಡೆಸಿ ಖಚಿತ ಮಾಡಿಕೊಳ್ಳುತ್ತದೆ. ಹೀಗೆ ಹಲವು ಹತ್ತು ಆಯಾಮದಿಂದ ಖಚಿತಪಡಿಸಿಕೊಂಡೇ ಮೇಲಽಕಾರಿಗಳಿಂದ ಅನುಮತಿ ಪಡೆದು ದಾಳಿ ಮಾಡಲಾಗುತ್ತದೆ. ಅನುಮತಿ ನೀಡುವ ಮೇಲಧಿಕಾರಿಗಳೂ ದಾಖಲೆ ಗಳೆಲ್ಲವನ್ನೂ ಸ್ವತಃ ಅವಲೋಕಿಸಿ, ದಾಳಿಯ ಅಗತ್ಯ ಮನವರಿಕೆ ಮಾಡಿಕೊಂಡು, ದಾಳಿಗೆ ಅನುಮತಿ ನೀಡಿರುತ್ತಾರೆ.
ಆದರೆ ತಮ್ಮ ಬೆಂಬಲಿಗರ ಮೇಲೆ ನಡೆದ ತೆರಿಗೆ ದಾಳಿಗಳ ಬಗ್ಗೆ ರಾಜಕೀಯ ವ್ಯಕ್ತಿಗಳು, ದಾಳಿಗಳು ರಾಜಕೀಯ ಪ್ರೇರಿತವಾಗಿವೆ, ಕಾಯಿದೆ ಬಾಹಿರವಾಗಿವೆ ಎಂದು ಆರೋಪಿಸುತ್ತಾರೆ. ಯಾವುದೇ ತನಿಖಾ ಸಂಸ್ಥೆಗಳ ದಾಳಿ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಪರೀಕ್ಷಿಸುವ ಅಧಿಕಾರ ಹೊಂದಿವೆ. ಆದರೆ
ಈವರೆಗೂ ಯಾರೊಬ್ಬರೂ ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸಿದ್ದಿಲ್ಲ. ಅಂದರೆ ದಾಳಿ ನಡೆದಾಗ ತೆರಿಗೆ ವಂಚನೆಯ ಕುರಿತು ಪುರಾವೆಗಳು ಸಿಕ್ಕಿವೆ ಎಂದರ್ಥ ವಲ್ಲವೇ? ಇದರಿಂದ ಯಾರನ್ನೋ ತೃಪ್ತಿಪಡಿಸಲು ಐ.ಟಿ, ಇ.ಡಿ ದಾಳಿಗಳು ಆಗುವುದಿಲ್ಲ ಎಂಬುವುದಂತೂ ಸ್ಪಷ್ಟ.