Wednesday, 11th December 2024

‘ಜಹಾ ಬಿಮಾರ್, ವಹಿ ಉಪಚಾರ್’ ರಾಜ್ಯದ ಪರಿಸ್ಥಿತಿ ಭಿನ್ನ

ರಾಜ್ಯದಲ್ಲಿ ಎಲ್ಲರ ಚಿತ್ತ ಲಾಕ್‌ಡೌನ್ ವಿಸ್ತರಣೆಯ ಕುರಿತಾಗಿಯೇ ಕೇಂದ್ರೀಕರಿಸಿದೆ. ಈ ವೇಳೆ ರಾಜ್ಯದ ಪರಿಸ್ಥಿತಿಯನ್ನು
ಅವಲೋಕಿಸುವುದಾದರೆ, ಯಾವುದೇ ಕ್ರಮಕೈಗೊಳ್ಳಲು ಸರಕಾರಕ್ಕೂ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ.

ದೇಶದ ಪರಿಸ್ಥಿತಿ ಹಾಗೂ ರಾಜ್ಯದ ಪರಿಸ್ಥಿತಿಯಲ್ಲಿ ಭಿನ್ನತೆ ಕಂಡುಬರುತ್ತಿದೆ. ರೋಗಿಗಳ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ
ಮೋದಿ ‘ಜಹಾ ಬಿಮಾರ್, ವಹಿ ಉಪಚಾರ್’ ಎಂಬ ಮಂತ್ರವನ್ನು ಘೋಷಿಸಿದ್ದಾರೆ. ಆದರೆ ರಾಜ್ಯದಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವ ಬೆಳವಣಿಗೆ ಕಂಡುಬಂದಿದೆ.

ಇದರಿಂದ ಈ ಮಾರ್ಗಸೂಚಿ ಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವುದು ಸುಲಭದ ಮಾತಲ್ಲ. ಆದರೆ ಇದೊಂದು ಮಹತ್ವದ ಮಾರ್ಗಸೂಚಿ. ‘ಜಹಾ ಬಿಮಾರ್, ವಹಿ ಉಪಚಾರ್’ ಸಮರ್ಪಕ ಜಾರಿಗೊಳಿಸಿದರೆ, ರಾಜ್ಯದ ಜನರಲ್ಲಿ ಖಂಡಿತವಾಗಿ ಭರವಸೆಯ ವಾತಾವರಣ ಮೂಡಲಿದೆ. ಆದರೆ ಇದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ಒದಗಿಸುವುದು ಒಂದು ದೊಡ್ಡ ಜವಾಬ್ದಾರಿ.

ರಾಜ್ಯದಲ್ಲಿನ ಸ್ಥಿತಿಯಂತೆಯೇ ದೇಶದ ಪರಿಸ್ಥಿತಿಯನ್ನು ಗಮನಿಸುವುದಾದರೆ, ಇಲ್ಲಿಯೂ ಸಾಕಷ್ಟು ಸವಾಲುಗಳನ್ನು ಗಮನಿಸ ಬಹುದು. ಇದೀಗ ಲ್ಯಾಬ್‌ಗಳಿಗೆ ತೆರಳದೆ ಮನೆಯಲ್ಲಿಯೇ ಕೋವಿಡ್ ಪರೀಕ್ಷೆ ಆರಂಭಿಸುತ್ತಿದ್ದೇವೆ. ನಾವೀಗ ಪರೀಕ್ಷೆಯನ್ನು ಆರಂಭಿಸುವ ವೇಳೆಗೆ ಕೆಲವು ದೇಶಗಳು ಸಹಜ ಸ್ಥಿತಿಗೆ ಧಾವಿಸುತ್ತಿವೆ. ಇತ್ತೀಚೆಗಷ್ಟೇ ಅಮೆರಿಕ ಮಾಸ್ಕ್ ನಿರ್ಬಂಧ ತೆರವುಗೊಳಿಸಿ ಅಚ್ಚರಿ ಮೂಡಿಸಿತ್ತು. ಇದರ ಬೆನ್ನಲ್ಲೆ ಹಂಗರಿ ದೇಶದಲ್ಲಿಯೂ ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ಕೋವಿಡ್ 19 ನಿರ್ಬಂಧ ಗಳನ್ನು ತೆಗೆದು ಹಾಕಲಾಗಿದೆ. ಈ ದೇಶದಲ್ಲಿ 5 ಮಿಲಿಯನ್ ಜನರಿಗೆ ಈಗಾಗಲೇ ಲಸಿಕೆ ಹಾಕಲಾಗಿರುವುದರಿಂದ ನಿರ್ಬಂಧ ಗಳನ್ನು ಹಂತಹಂತವಾಗಿ ತೆಗೆಯಲಾಗುತ್ತಿದೆ ಎಂದು ಅಲ್ಲಿನ ಪ್ರಧಾನಿ ವಿಕ್ಟರ್ ಓರ್ಬನ್ ವಿವರಿಸಿದ್ದಾರೆ. ಈ ಬೆಳವಣಿಗೆ
ಗಮನಿಸಿದಾಗ, ಭಾರತದ ನಡೆ ವಿಳಂಬವಾಗುತ್ತಿದೆಯೇ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತವಾಗುತ್ತದೆ.