Friday, 13th December 2024

ರೆಡ್ಡಿ ಪಕ್ಷ ಬುಟ್ಟಿಯೊಳಗಿನ ಹಾವೇ?

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದ ದೇವರಾಜ ಅರಸು, ಎಸ್. ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ವಿಜಯ ಸಂಕೇಶ್ವರ, ಬಿ.ಶ್ರೀರಾಮುಲು ಅವರ ರಾಜಕೀಯ ಜೀವನ ಹೇಗೆ ತಿರುವು ಪಡೆದುಕೊಂಡಿತು ಎಂಬುದು ಇನ್ನೂ ರಾಜ್ಯದ ಜನರ ಕಣ್ಣ ಮುಂದಿರುವ ಹೊತ್ತಿನಲ್ಲೇ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷವೊಂದನ್ನು ಸ್ಥಾಪಿಸುವುದಾಗಿ ಭಾನುವಾರ ಪ್ರಕಟಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮರ್ಥ್ಯವಿರುವ ಯಾರಾದರೂ ಹೊಸ ಪಕ್ಷ ಕಟ್ಟಬ ಹುದು. ಅದರಂತೆ ರೆಡ್ಡಿ ಅವರು ಕೂಡ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ರೆಡ್ಡಿ ಬಳಿ ಹಣವಿದೆ ಎನ್ನುವುದು ನಿಜವಾದರೂ ಹಣದಿಂದಲೇ ಎಲ್ಲವನ್ನೂ ಪಡೆಯ ಲಾಗದು ಎಂಬ ಮಾತೂ ಅಷ್ಟೇ ಸತ್ಯ. ಹೊಸ ಪಕ್ಷ ಸ್ಥಾಪನೆಗೆ ಅದರದ್ದೇಯಾದ ಪೂರ್ವ ಸಿದ್ಧತೆ ಅಗತ್ಯ. ಜನಾರ್ದನ ರೆಡ್ಡಿ ಅವರು ಯುದ್ಧ ಕಾಲದಲ್ಲಿ ಶಸಾಭ್ಯಾಸ ಎನ್ನುವಂತೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಉಳಿದಿರುವಾಗ ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿದ್ದಾರೆ.

ಇದಕ್ಕೆ ಬೇಕಾಗಿರುವ ಯಾವ ಸಿದ್ಧತೆಯನ್ನೂ ಅವರು ಮಾಡಿದಂತಿಲ್ಲ.

ಅಲ್ಲದೆ, ಅವರೊಂದಿಗೆ ಯಾರ‍್ಯಾರು ಬರುತ್ತಾರೆ, ಯಾವ ಪಕ್ಷದಿಂದ ಪ್ರಮುಖ ನಾಯಕ ರನ್ನು ಸೆಳೆಯುತ್ತಾರೆ (ಈಗಾಗಲೇ ಆತ್ಮೀಯ ಸ್ನೇಹಿತ, ಸಚಿವ ಬಿ.ಶ್ರೀರಾಮುಲು, ಸಹೋದರ ಸೋಮಶೇಖರ್ ರೆಡ್ಡಿ ಕೂಡ ಜನಾರ್ದನ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ) ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ, ತಮ್ಮ ಪಕ್ಷದ ಅಜೆಂಡಾ ಏನು ಎಂಬ ಬಗ್ಗೆ ಏನೂ ತಿಳಿಸಿಲ್ಲ. ಹೀಗಾಗಿ ಇದೊಂದು ಬುಟ್ಟಿಯೊಳಗಿನ ಹಾವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಬಿಜೆಪಿಯಲ್ಲಿ ಕಡೆಗಣನೆಗೆ ಒಳಗಾಗಿದ್ದ ರೆಡ್ಡಿ ಮತ್ತೆ ಮುನ್ನೆಲೆಗೆ ಬರಬೇಕು ಎಂಬ ಉದ್ದೇಶದಿಂದಲೇ ಹೊಸ ಪಕ್ಷದ ಘೋಷಣೆ ಮಾಡಿರಬಹುದು ಎಂಬುದು ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗಾದರೂ ಅನಿಸುತ್ತದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪನೆ ಮಾಡಿದಾಗ ಆಗಿರುವ ಪರಿಣಾಮ ಈಗಲೂ ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ. ರೆಡ್ಡಿ ಅವರು ಅದನ್ನೇ ಗಮನದಲ್ಲಿಟ್ಟುಕೊಂಡು ಬುಟ್ಟಿಯೊಳಗೆ ಹಾವಿಟ್ಟುಕೊಂಡು ಆಟವಾಡುತ್ತಿದ್ದಾರಾ?

Read E-Paper click here