Friday, 13th December 2024

ನ್ಯಾಯದ ಮುಂದೆ ಎಲ್ಲರೂ ಒಂದೇ ಎಂಬುದು ಸಾಬೀತಾಗಲಿ

ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್ ಕೇಸ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ವಶಕ್ಕೆ ಸೇರಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ.

ಪ್ರಕರಣ ಗಂಭೀರ ಸ್ವರೂಪzಗಿರುವುದರಿಂದ, ಸಂತ್ರಸ್ತರು ತುಂಬಾ ಮಂದಿ ಇರುವುದರಿಂದ, ಎಸ್‌ಐಟಿ ಚುರುಕಾಗಿ ತನಿಖೆ ನಡೆಸುತ್ತಿದೆ. ಇನ್ನು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಜೆಡಿಎಸ್ ಅನ್ನು ಹಣಿಯಲು ಸಿಕ್ಕಿರುವ ಸುವರ್ಣಾವಕಾಶವೂ ಇದಾಗಿರುವುದರಿಂದ, ಗೃಹ ಇಲಾಖೆಯೂ ಬಹಳ ಚುರುಕಾಗಿಯೇ ಇದರಲ್ಲಿ ತೊಡಗಿಕೊಂಡಿದೆ. ಪ್ರಭಾವಿಗಳು ಅಪರಾಧ ನಡೆಸಿದಾಗ ಅವರನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಇಷ್ಟೊಂದು ಚುರುಕಾಗಿ ಕಾರ್ಯ ಪ್ರವೃತ್ತರಾಗುವುದನ್ನು ಹಿಂದೆ ಎಂದೂ ಈ ರಾಜ್ಯ ಕಂಡಿರಲಿಲ್ಲ.

ಅಷ್ಟರ ಮಟ್ಟಿಗೆ ಪೊಲೀಸ್ ಇಲಾಖೆಯನ್ನು ಚುರುಕಾಗಿಸಿದ ಈ ಪ್ರಕರಣ ವಿಶೇಷವೇ ಸರಿ. ದೇವೇಗೌಡರ ಕುಟುಂಬ ಪ್ರಭಾವಿ ಕುಟುಂಬವಾಗಿದೆ. ಅಲ್ಲದೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಪ್ರಮುಖ ನಾಯಕರು. ಸಂತ್ರಸ್ತೆ, ದೂರುದಾರರು ಗಟ್ಟಿಯಾಗಿ ನಿಂತು, ಪೊಲೀಸರು ಸಾಕ್ಷ್ಯಗಳನ್ನು ಕರಾರುವಕ್ಕಾಗಿ ಕಲೆಹಾಕಿ ಕೋರ್ಟ್‌ನಲ್ಲಿ ಮಂಡಿಸಿ, ವಿಚಾರಣೆ ಪಾರದರ್ಶಕ ವಾಗಿ ನಡೆದರೆ ಆರೋಪಿಗಳಿಗೆ ಶಿಕ್ಷೆಯಾಗಬಹುದು.

ಇನ್ನು ಮುಂದಿನ ಕೆಲಸ ಪೊಲೀಸರಿಗೂ ಕೋರ್ಟಿಗೂ ಬಿಟ್ಟದ್ದು. ಈ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ಸಾಬೀತಾಗಿದೆ, ಎಷ್ಟರಲ್ಲಿ ಶಿಕ್ಷೆಯಾಗಿದೆ ಎಂಬ ಅಂಕಿಅಂಶಗಳನ್ನು ತೆಗೆದು ನೋಡಿದರೆ ನಿರಾಶೆಯಾಗುತ್ತದೆ. ಈ ಪ್ರಕರಣವೂ ಆ ಸಾಲಿಗೆ ಸೇರದಿರಲಿ. ಸದ್ಯಕ್ಕಂತೂ ಪ್ರಮುಖ ಆರೋಪಿಯ ಸೆರೆಯಾಗಿದೆ. ನಿಷ್ಪಕ್ಷಪಾತವಾದ ತನಿಖೆ ನಡೆದು ಸತ್ಯ ಹೊರಬೀಳಲಿ. ನೂರಾರು ಸಂತ್ರಸ್ತೆಯರ ನಿಟ್ಟುಸಿರಿಗೆ ಕಾರಣ ವಾದವರು ಶಿಕ್ಷೆಗೆ ಒಳಗಾಗಲಿ. ಹಾಗೆಯೇ, ಮುಖ ಬ್ಲರ್ ಕೂಡ ಮಾಡದೆ ಸಂತ್ರಸ್ತ ಮಹಿಳೆಯರ ಸಾರ್ವಜನಿಕ ಅವಮಾನಕ್ಕೆ ಕಾರಣವಾದವರಿಗೆ ಕೂಡ ಶಿಕ್ಷೆಯಾಗಲಿ.

ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ನ್ಯಾಯದ ಮುಂದೆ ಎಲ್ಲರೂ ಒಂದೇ ಎಂಬುದು ಸಾಬೀತಾಗಲಿ. ಪ್ರಕರಣದಲ್ಲಿ ವಂಚನೆಗೊಳಗಾದವರ ಮಾನ ಕಾಪಾಡುವ ಕೆಲಸವೂ ಸರಕಾರದಿಂದ ಆಗಲಿ.