ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ರಾಜಭವನದ ಈ ನಡೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ. ‘ಮೂವರ ಅರ್ಜಿದಾರರು ರಾಜಭವನಕ್ಕೆ ಸಲ್ಲಿಸಿದ ದೂರಿನಲ್ಲಿ ಸಿಎಂ ವಿರುದ್ಧದ
ಆರೋಪಗಳನ್ನು ಪುಷ್ಟೀಕರಿಸುವ ದಾಖಲೆಗಳಿರುವುದರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಆದರೆ ಈ
ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡಬೇಕಾದ ಅಗತ್ಯವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರನ್ನು ದಾಳವನ್ನಾಗಿಸಿಕೊಡು ರಾಜ್ಯ ಸರಕಾರವನ್ನು ಅತಂತ್ರಗೊಳಿಸಲು ಕೇಂದ್ರ ಸರಕಾರ ಹೆಣೆದ ಸಂಚು ಎಂದೂ ಸಿಎಂ ದೂರಿದ್ದಾರೆ. ೨೦೧೧ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್ ಅನುಮತಿ ನೀಡಿದ್ದರು. ಈ ಎರಡೂ ಪ್ರಕರಣಗಳನ್ನು ಈಗ ತಾಳೆ ಹಾಕಲಾಗುತ್ತಿದೆ. ಆದರೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲೇ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿತ್ತು.
ಲೋಕಾಯುಕ್ತವೇ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೋರಿತ್ತು. ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಈ ತನಕ ಯಾವುದೇ ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ದೂರನ್ನು ಆಧರಿಸಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ದೂರುದಾರರು ಅರ್ಜಿ ಸಲ್ಲಿಸಿದ ದಿನವೇ ರಾಜಭವನವು ಸಿಎಂ ಕಚೇರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವ ತುರ್ತು ಮತ್ತು ಅನಿವಾರ‍್ಯತೆ ಏನಿತ್ತು? ಈ ಹಿಂದೆ ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ
ಅನುಮತಿ ಕೋರಿ ಅರ್ಜಿಗಳನ್ನು ಪರಿಗಣಿಸದಿರಲು ಕಾರಣ ಏನು? ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸರಕಾರವೇ ನೇಮಿಸಿದ ಏಕ ಸದಸ್ಯ ಆಯೋಗದ ವರದಿ ನೀಡುವವರೆಗೆ ಕಾಯುವ ಸಂಯಮ ಏಕೆ ತೋರಿಸಿಲ್ಲ? ಇತ್ಯಾದಿ ಪ್ರಶ್ನೆಗಳಿಗೆ ರಾಜಭವನ ಉತ್ತರಿಸಬೇಕಾಗಿದೆ.
ಈ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ, ಸಿದ್ದರಾಮಯ್ಯ ಅವರು ಆರೋಪಿಸಿದಂತೆ ರಾಜಭವನವು ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡಿದೆ ಎಂದು ಭಾವಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಇನ್ನೂ ಸಾಕಷ್ಟು ಕಾನೂನು ಪ್ರಕ್ರಿಯೆ ಬಾಕಿ ಇರುವುದರಿಂದ ಸದ್ಯಕ್ಕಂತೂ ಸಿದ್ದರಾಮಯ್ಯ ಅವರು ರಾಜೀ ನಾಮೆ ನೀಡುವ ಸಾಧ್ಯತೆ ಇಲ್ಲ. ಆದರೆ ರಾಜಭವನದ ಮೂಲಕ ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದಿರುವುದು ದುರದೃಷ್ಟ ಕರ.