Wednesday, 11th December 2024

ಕೆಎಎಸ್ ಪರೀಕ್ಷೆ: ಅಧ್ವಾನದ ಪರಾಕಾಷ್ಠೆ

ಇತ್ತೀಚೆಗೆ ನಮ್ಮ ಶಾಲಾ ಕಾಲೇಜುಗಳ ಪರೀಕ್ಷೆ, ಪ್ರವೇಶ ಪರೀಕ್ಷೆ, ಸರಕಾರಿ ನೇಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದರೆ ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎನಿಸಿಕೊಂಡ ಕನ್ನಡಿಗರಾದ ನಮ್ಮ ಬುದ್ದಿಮತ್ತೆ, ಪ್ರೌಢಿಮೆಯ ಬಗ್ಗೆ ನಮಗೇ ಸಂದೇಹ ಮೂಡುವಂತಾಗಿದೆ. ಕರ್ನಾಟಕದ ಭವಿಷ್ಯದ ಆಡಳಿತವನ್ನು ಮುನ್ನಡೆಸಬೇಕಾದ ಗಜೆಟೆಡ್ ಅಧಿಕಾರಿಗಳ ನೇಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಗಮನಿಸಿದರೆ ಈ ಸಂದೇಹ ಬಾರದೇ ಇರಲು ಸಾಧ್ಯವಿಲ್ಲ.

ಆಗಷ್ಟ್ ೨೭ರಂದು ನಮ್ಮ ಲೋಕಸೇವಾ ಆಯೋಗವು ನಡೆಸಿದ ಕೆಎಎಸ್ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯನ್ನು ಒಮ್ಮೆ ಅವಲೋಕಿಸಿದರೆ, ನಮ್ಮ ರಾಜ್ಯದಲ್ಲಿ ಈಗ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಮಾಡುವವರು ಯಾರು ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಮನದಟ್ಟುಕೊಳ್ಳಬೇಕಾಗಿದೆ. ಕೆಎಎಸ್ ಪರೀಕ್ಷೆಯ ಪ್ರಶ್ನೆಗಳು ಕ್ಷಿಷ್ಟವಾಗಿರಬೇಕು ನಿಜ. ಆದರೆ ಇದನ್ನೇ ತಪ್ಪಾಗಿ ಭಾವಿಸಿದ ಆಯೋಗದ ಪರೀಕ್ಷಾ ವಿಭಾಗ, ಇಂಗ್ಲಿಷ್ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ಮುಖಾಂತರ ತರ್ಜುಮೆಗೊಳಿಸಿ, ಕನ್ನಡದ ಅಭ್ಯರ್ಥಿಗಳು ಕನ್ನಡವನ್ನೇ ಮರೆತು ಇಂಗ್ಲಿಷ್ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಹಾಯಿಸುವಂತೆ ಮಾಡಿದೆ. ಈ ‘ಗೂಗ್ಲಿ ಕನ್ನಡ’ವನ್ನು ಅರ್ಥೈಸಿಕೊಂಡು ಯಾರಾದರೂ ಪರೀಕ್ಷೆ ಬರೆದು ತೇರ್ಗಡೆಯಾಗಲು ಸಾಧ್ಯವೇ ಎಂದು ಪರಿಶೀಲಿಸಲು ಕರ್ನಾಟಕ ಲೋಕಸೇವಾ ಆಯೋಗ ನೇಮಿಸಿದ ಪ್ರಶ್ನೆಪತ್ರಿಕೆ ತಜ್ಞರಿಗೆ ಕನ್ನಡ ಭಾಷಾಜ್ಞಾನದ ಕೊರತೆ ಇದ್ದಂತಿದೆ.

ಒಟ್ಟಾರೆ ೬ ಕೋಟಿ ಕನ್ನಡಿಗರಲ್ಲಿ ಕೆಎಎಸ್ ಪರೀಕ್ಷೆಗೆ ಇಂಗ್ಲಿಷ್ ಮತ್ತು ತಿಳಿ ಗನ್ನಡದಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವ ಸಾಮರ್ಥ್ಯ ಯಾರಿಗೂ ಇಲ್ಲ ಎಂದು
ಆಯೋಗ ತೋರಿಸಿಕೊಟ್ಟಿದೆ. ಸಮರ್ಪಕ ಪ್ರಶ್ನೆಪತ್ರಿಕೆ ಹಂಚಲಾಗದ ನಮ್ಮ ದುರವಸ್ಥೆ ಇದೇ ಮೊದಲೇನಲ್ಲ. ಮೊನ್ನೆಯಷ್ಟೇ ನಮ್ಮ ವಿವಿಯೊಂದರಲ್ಲಿ
ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆಯನ್ನು ಹಂಚಿದ್ದರು. ಮೇ ತಿಂಗಳಲ್ಲಿ ನಡೆದ ಪಿಯು ವಿಜ್ಞಾನ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಲಾಗಿತ್ತು, ನಂತರದ ಸಿಇಟಿ ಪರೀಕ್ಷೆಯಲ್ಲೂ ಇದೇ ರೀತಿಯ ಅಧ್ವಾನಗಳ ಕಾರಣಕ್ಕೆ ಗ್ರೇಸ್ ಮಾರ್ಕ್ಸ್ ಕೊಡುವ,
ಒಟ್ಟು ಅಂಕಗಳನ್ನು ಕಡಿತಗೊಳಿಸುವ ಪ್ರಮೇಯ ಎದುರಾಗಿತ್ತು.

ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೂ ಸಿಇಟಿಯಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆಯಲಾಗದೆ ತಮಗೆ ಬೇಕಾದ ಕಾಲೇಜುಗಳಿಗೆ ಸೇರುವ ಅವಕಾಶದಿಂದ ವಂಚಿತರಾಗಿದ್ದಾರೆ. ಒಂದು ಪ್ರಶ್ನೆ ಪತ್ರಿಕೆಯನ್ನೂ ತಪ್ಪಿಲ್ಲದೆ, ಸಿಲೆಬಸ್‌ಗೆ ತಕ್ಕಂತೆ ಸಿದ್ದಪಡಿಸಲಾಗದ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಯ ಬೌದ್ಧಿಕ ದಾರಿದ್ರ್ಯಕ್ಕೆ, ನಿರ್ಲಕ್ಷ್ಯಕ್ಕೆ, ಉಢಾಳತನಕ್ಕೆ ನಮಗೆ ನಾವೇ ಪಶ್ಚಾತ್ತಾಪಪಟ್ಟುಕೊಳ್ಳಬೇಕಿದೆ.