Saturday, 14th December 2024

ಆರೋಗ್ಯ ಕ್ಷೇತ್ರದತ್ತ ಗಮನ ಹೆಚ್ಚಾಗಲಿ

ಕರ್ನಾಟಕದಲ್ಲಿ ಕರೋನಾ ಎರಡನೇ ಅಲೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದ್ದರೂ, ಇತ್ತೀಚಿಗೆ ಡೆಂಗ್ಯೂ ಜ್ವರದ ಪ್ರಕರಣ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣದಲ್ಲಿ ಕರೋನಾಕ್ಕಿಂತ ಡೆಂಗ್ಯೂ ಹೆಚ್ಚು ಅಪಾಯಕಾರಿ. ಆದ್ದರಿಂದ ರಾಜ್ಯ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಈಗಾಗಲೇ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಗ್ಯೂ ಪ್ರಕರಣಗಳಿಂದ ದಾಖಲಾಗುತ್ತಿರುವ ಮಕ್ಕಳಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಹಾಸಿಗೆಯ ಅಭಾವವಿದೆ ಎನ್ನುವ ಮಾತುಗಳು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಕೇಳಿಬಂದಿದೆ.

ಕರೋನಾ ಇಳಿಕೆಯಾಗಿದ್ದರೂ, ಮೂರನೇ ಅಲೆಯ ಎಚ್ಚರಿಕೆಯನ್ನು ಈಗಾಗಲೇ ತಜ್ಞರು ನೀಡುತ್ತಿರುವುದರಿಂದ ಡೆಂಗ್ಯೂ ಹಾಗೂ ಕರೋನಾ ಎರಡನ್ನು ಎಚ್ಚರಿಕೆ ಯಿಂದ ನಿಭಾಯಿಸಬೇಕಿದೆ. ಏಕೆಂದರೆ ಡೆಂಗ್ಯೂ ಈ ಬಾರಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಕರೋನಾ ಮೂರನೇ ಅಲೆಯೂ ಮಕ್ಕಳಲ್ಲಿ ಹೆಚ್ಚು ಹಬ್ಬುತ್ತದೆ ಎನ್ನುವ ಮಾತನ್ನು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಸರಕಾರ ಈಗಿನಿಂದಲೇ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಈಗಾಗಲೇ ಕರೋನಾ ಎರಡನೇ ಅಲೆಯಲ್ಲಿ ರಾಜ್ಯ ಸರಕಾರ ಮುಂದಾಲೋಚನೆ ಇಲ್ಲದೇ, ಮಾಡಿಕೊಂಡ ಎಡವಟ್ಟಿನಿಂದ ಭಾರಿ ಪ್ರಮಾಣದ ಜೀವ ನಷ್ಟವಾಗಿರು ವುದು ನಾವು ನೋಡಿದ್ದೇವೆ. ಆದ್ದರಿಂದ ಸರಕಾರ ಈ ಬಾರಿ ಕಳೆದ ಬಾರಿಯಾದ ತಪ್ಪು ನಿರ್ಧಾರದಿಂದ ಆಗಿರುವ ಸಮಸ್ಯೆಯ ಈ ಬಾರಿಯಾಗದಂತೆ ಎಚ್ಚರ ವಹಿಸಬೇಕಿದೆ.

ವಿಧಾನಸಭೆಯಲ್ಲಿ ಸುಧಾಕರ್ ಅವರು ಬ್ಲ್ಯಾಕ್ ಫಂಗಸ್ ಔಷಧದ ಕೊರತೆ ಹೇಳಿ ಆರ್ಡರ್ ನೀಡಿದ್ದೇವೆ. ಬಂದ ಕೂಡಲೇ ಹಂಚುತ್ತೇವೆ ಎನ್ನುವ ಮಾತನ್ನು ಹೇಳಿದ್ದಾರೆ. ಈ ರೀತಿ ಔಷಧ ಖಾಲಿಯಾಗುವ ತನಕ ಸುಮ್ಮನಿರುವ ಬದಲು, ಆಗಾಗ್ಗೆ ಔಷಧ ಹಾಗೂ ವೈದ್ಯಕೀಯ ಸಲಕರಣೆಯ ಕೊರತೆ ಹಾಗೂ ಸಿಬ್ಬಂದಿಗಳ ಲಭ್ಯತೆ ಬಗ್ಗೆ ಎಚ್ಚರವಹಿಸಬೇಕು. ಯಾವುದಾದರೂ ಜಿಲ್ಲೆಯಲ್ಲಿ ಸಮಸ್ಯೆಯಾಗಿದ್ದರೆ, ಕೂಡಲೇ ನೆರೆ ಜಿಲ್ಲೆಯ ಆರೋಗ್ಯ ಸಿಬ್ಬಂದಿಗಳನ್ನು ತಾತ್ಕಲಿಕವಾಗಿ ಯಾದರೂ ಸಮಸ್ಯೆಯಿರುವ ಜಿಲ್ಲೆಗೆ ಕಳುಹಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.