ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಯುವತಿಯರ ಒಳ ಉಡುಪು ತೆಗೆಸಿದ ವಿಚಾರ ವಿವಾದಕ್ಕೀಡಾಗಿದ್ದ, ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರವಿದು.
ಅನುಮಾನವೇ ಇಲ್ಲ ಮುಕ್ತ ಮತ್ತು ನ್ಯಾಯ ಸಮ್ಮತ ಪರೀಕ್ಷೆಗಳು ನಡೆಯಲೇ ಬೇಕು. ಆದರೆ, ಆಭರದಲ್ಲಿ ಮಾನವತೆಯನ್ನೂ ಮೀರಿ ವ್ಯಕತಿಗತ ಸ್ವಾತಂತ್ರ್ಯ ವನ್ನು ಕಿತ್ತುಕೊಳ್ಳುವುದು, ವಿದ್ಯಾರ್ಥಿಗಳ ಖಾಸಗೀತನಕ್ಕೆ ಧಕ್ಕೆ ತರುವುದು ಯಾವ ದೃಷ್ಟಿಯಿಂದಲೂ ಒಪ್ಪತಕ್ಕದ್ದು ಅಲ್ಲವೇ ಅಲ್ಲ. ಒಳ ಉಡುಪು ತೆಗೆಸಿದ ಕಾರಣ ತನ್ನ ತಲೆಗೂದಲನ್ನು ಎದೆಗೆ ಮುಚ್ಚಿಕೊಂಡು ಪರೀಕ್ಷೆ ಎದುರಿಸಬೇಕಾ ಯಿತು.
ಇದು ಅತ್ಯಂತ ಕೆಟ್ಟ ಅನುಭವ ಎಂದು ಯುವತಿಯೊಬ್ಬಳು ತನಗಾದ ಅವಮಾನವನ್ನು ವಿವರಿಸಿದ್ದಾಳೆ. ಅನಾಗರಿಕ ವರ್ತನೆಗೆ ಇದು ಸಾಕ್ಷಿ. ಕೊಠಡಿ ಮೇಲ್ವಿಚಾರಕರು ತನಗೆ ಕರೆ ಮಾಡಿದರು ಮತ್ತು ಸ್ಕ್ಯಾನಿಂಗ್ ಇದೆ ಎಂದು ಹೇಳಿದರು. ಅವರು ಸ್ಕ್ಯಾನ್ ಮಾಡಿದ ನಂತರ ನಮ್ಮನ್ನು ಬಿಡುತ್ತಾರೆ ಎಂದು ನಾವು ಭಾವಿಸಿದ್ದೇವು. ಆದರೆ ಅವರು ನಮ್ಮನ್ನು ಎರಡು ಸರತಿಯಲ್ಲಿ ನಿಲ್ಲುವಂತೆ ಹೇಳಿದರು.
ಒಂದು ಲೋಹದ ಕೊಕ್ಕೆಗಳಿಲ್ಲದ ಬ್ರಾಗಳನ್ನು ಧರಿಸಿರುವ ಹುಡುಗಿಯರಿಗೆ ಮತ್ತು ಇನ್ನೊಂದು ಸಾಲು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿರುವ ಯುವತಿಯರ ಸಾಲು. ಅವರು ನನ್ನನ್ನು ಕೇಳಿದರು, ನೀವು ಲೋಹದ ಕೊಕ್ಕೆ ಇರುವ ಒಳ ಉಡುಪುಗಳನ್ನು ಧರಿಸಿದ್ದೀರಾ? ನಾನು ಹೌದು ಎಂದು ಹೇಳಿದೆ, ಆದ್ದರಿಂದ ಆ ಸಾಲಿಗೆ ಸೇರಲು ಹೇಳಿದರು. ಕೊನೆಗೆ ನಮ್ಮ ಬ್ರಾ ತೆಗೆದು ಮೇಜಿನ ಮೇಲೆ ಇಡಲು ಅವರು ಹೇಳಿದರು. ಎಲ್ಲಾ ಬ್ರಾಗಳು ಒಟ್ಟಿಗೆ ಜೋಡಿಸಲ್ಪಟ್ಟಿದ್ದವು. ನಾವು ಹಿಂತಿರುಗಿದಾಗ ನಮ್ಮ ಒಳ ಉಡುಪು ನಮಗೆ ಸಿಗುತ್ತದೆಯೇ ಎಂದು ನಮಗೆ ಗ್ಯಾರಂಟಿ ಇಲ್ಲ. ಒಳಉಡುಪು ತೆಗೆದುಕೊಳ್ಳುವುದು ಹರಸಾಹಸವಾಗಿತ್ತು ಎಂದು ಆಕೆ ವಿವರಿಸಿದ್ದಾಳೆ.
೧೭ ವರ್ಷದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದಾಗ ಇವೆಲ್ಲ ಆಘಾತಕಾರಿ ಘಟನೆ ಹೊರಬಿದ್ದಿದೆ. ಪರೀಕ್ಷೆ ಬರೆಯುವ ಮುನ್ನ ಶೇ.೯೦ರಷ್ಟು ಹೆಣ್ಣುಮಕ್ಕಳು ತಮ್ಮ ಒಳಉಡುಪು ತೆಗೆಯಬೇಕಿತ್ತು ಎಂಬುದಂತೂ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ. ತಕ್ಷಣ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲದೇ,
ಇನ್ನೆಂದೂ ಇಂಥವು ಮರುಕಳಿಸದಂತೆ ಆಗಬೇಕಿದೆ.