Saturday, 14th December 2024

ಕೆರೆ ಭರ್ತಿಗೆ ಚಾಲನೆ ದೊರೆಯಲಿ

ಕಳೆದ ವರ್ಷ ಕೈಕೊಟ್ಟಿದ್ದ ಮುಂಗಾರು ಈ ಬಾರಿ ಸಮೃದ್ಧವಾಗಿರುವ ಸೂಚನೆ ಸಿಕ್ಕಿದೆ. ಮೇ ಮೊದಲ ವಾರದಿಂದಲೇ ಆರಂಭವಾದ ಮುಂಗಾರುಪೂರ್ವ ಮಳೆಯಿಂದಾಗಿ ರಾಜ್ಯದ ಜನತೆ ನೀರಿನ ಸಂಕಷ್ಟದಿಂದ ದೂರವಾಗಿದ್ದಾರೆ. ಇದೀಗ ರಾಜ್ಯಾದ್ಯಂತ ಮುಂಗಾರು ಅಬ್ಬರ ಆರಂಭವಾಗಿದ್ದು ನದಿ, ಜಲಾಶಯಗಳ ಮಟ್ಟ ಏರಿಕೆ ಕಂಡಿದೆ.

ಕೆರೆ-ಕಟ್ಟೆಗಳು ಭರ್ತಿಯಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಈ ತನಕ ಶೇ. ೬೨ರಷ್ಟು ಹೆಚ್ಚು ಮಳೆ ಸುರಿದಿದೆ. ರಾಜ್ಯದ ಜನತೆಗೆ ಇದು ಶುಭ ಸುದ್ದಿ . ಆದರೆ ಈ ಹಿಂದಿನ ನಮ್ಮ ತಪ್ಪುಗಳನ್ನು ಪುನರಾವರ್ತಿಸಿದರೆ, ಎಷ್ಟೇ ಮಳೆ ಸುರಿದರೂ ಏಪ್ರಿಲ್, ಮೇ ತಿಂಗಳಲ್ಲಿ ನೀರಿಗಾಗಿ ಹಪಿಹಪಿಸುವ ಚಾಳಿ ನಿಲ್ಲುವುದಿಲ್ಲ. ರಾಜ್ಯದಲ್ಲಿ ಕೆರೆ ಕಟ್ಟೆಗಳನ್ನು ತುಂಬಿಸುವ ಕೆಲಸಕ್ಕೆ ಈಗಿಂದೀಗಲೇ ಚಾಲನೆ ನೀಡಬೇಕು. ಕಳೆದ ವರ್ಷ ಕಾವೇರಿ ಆಶ್ರಿತ ಜಿಲ್ಲೆಗಳಲ್ಲಿ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ತಡವಾಗಿ ಚಾಲನೆ ನೀಡಲಾಗಿತ್ತು. ಅಷ್ಟರಲ್ಲಿ ಮುಂಗಾರು ಕೈ ಕೊಟ್ಟಿತ್ತು.

ತಮಿಳುನಾಡು ತನ್ನ ಪಾಲಿನ ನೀರಿಗಾಗಿ ಬೇಡಿಕೆ ಮಂಡಿಸಿತ್ತು. ಇದರಿಂದ ಈ ಭಾಗದ ರೈತರು ಬೇಸಿಗೆಯಲ್ಲಿ ಬೆಳೆಗೆ ನೀರಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿ ದ್ದರು. ಈ ಬಾರಿ ತಮಿಳುನಾಡು ಕ್ಯಾತೆ ತೆಗೆಯುವ ಮುನ್ನವೇ ಕೆರೆ ಕಟ್ಟೆಗಳನ್ನು ತುಂಬಿಸುವ ಕೆಲಸಕ್ಕೆ ಚಾಲನೆ ಸಿಗಬೇಕಾಗಿದೆ. ರಾಜ್ಯದಲ್ಲಿ ೧೦ ವರ್ಷಗಳ ಹಿಂದೆ ಕೆರೆಗಳನ್ನು ತುಂಬಿಸುವ ಯೋಜನೆ ಆರಂಭವಾದ ಬಳಿಕ ೧೧೭ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದೆ. ಅದರಲ್ಲೂ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರದಂತಹ ಜಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದೆ. ಕೋಲಾರದ ಭಾಗದ ಫ್ಲೋರೈಡ್ ಸಮಸ್ಯೆಗೆ ಈ ಯೋಜನೆ ಸ್ವಲ್ಪ ಮಟ್ಟಿಗೆ ಪರಿಹಾರ ಕಲ್ಪಿಸಿದೆ. ಇದೇ ರೀತಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ವಿಶೇಷವಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲೂ ಕೆರೆ ತುಂಬಿ ಸುವ ಯೋಜನೆ ರೈತರ ಪಾಲಿಗೆ ಸಂಜೀವಿನಿಯಾಗಿದೆ. ಈ ಯೋಜನೆಯಿಂದ ಕೆರೆಗಳು ತುಂಬುವುದು ಮಾತ್ರವಲ್ಲ ಅಂತರ್ಜಲ ಮಟ್ಟ ಏರಿಕೆಯಾಗುವು ದರಿಂದ ಬೋರ್ ವೆಲ್ ಕೊರೆದು ಕೃಷಿ ಮಾಡುವ ರೈತರಿಗೂ ಪ್ರಯೋಜನಕಾರಿಯಾಗಿದೆ.

ಕೆರೆ ಭರ್ತಿ ಯೋಜನೆಯ ಕಾರಣದಿಂದಲೇ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಕುಸಿತಕ್ಕೆ ಸ್ವಲ್ಪ ಮಟ್ಟಿಗಾದರೂ ತಡೆ ಬಿದ್ದಿದೆ. ಮಳೆ ನೀರನ್ನು ಸಮರ್ಥ ವಾಗಿ ಬಳಸಿಕೊಳ್ಳುವುದೊಂದೇ ಭವಿಷ್ಯದಲ್ಲಿ ನಮ್ಮ ನೀರಿನ ಬವಣೆಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗ.