Saturday, 14th December 2024

ಮಹಾರಾಷ್ಟ್ರದ ಸಚಿವರಿಗೆ ನಿರ್ಬಂಧ ವಿಧಿಸಿ

‘ಬೆಳಗಾವಿ ಗಡಿ ವಿವಾದದ ಕಾರಣ ತ್ವೇಷಮಯ ವಾತಾವರಣವಿದ್ದು, ಈ ಸಂದರ್ಭದಲ್ಲಿ ಬೆಳಗಾವಿಗೆ ಬರಬೇಡಿ’ ಎಂದು ಕರ್ನಾ ಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿದ್ದರೂ, ‘ಡಿಸೆಂಬರ್ ೬ಕ್ಕೆ ಬೆಳಗಾವಿಗೆ ಹೋಗಿಯೇ ತೀರುತ್ತೇವೆ.

ಕರ್ನಾಟಕದ ಮುಖ್ಯಮಂತ್ರಿ ಹೇಳಿಕೆಗೆ ಪ್ರತ್ಯುತ್ತರ ನೀಡಲೆಂದೇ ಹೋಗುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ್ ದೇಸಾಯಿ ಸವಾಲು ಹಾಕಿದ್ದಾರೆ. ನಿಜವಾಗಿಯೂ ಎರಡೂ ರಾಜ್ಯಗಳ ಹಿತದೃಷ್ಟಿ ಗಮನದಲ್ಲಿದ್ದರೆ ಈ ರೀತಿ ಪರಿಸ್ಥಿತಿಯಲ್ಲಿ ಚಂದ್ರಕಾಂತ್ ಪಾಟೀಲ ಮತ್ತು ಶಂಭುರಾಜ್ ದೇಸಾಯಿ ಅವರು ಬರುವ ಮನಸ್ಸು ಮಾಡುತ್ತಿರಲಿಲ್ಲ.

ಆದರೆ ಅವರಿಬ್ಬರೂ ಸೇರಿದಂತೆ ಮಹಾರಾಷ್ಟ್ರ ಸರಕಾರಕ್ಕೆ ಎರಡೂ ರಾಜ್ಯಗಳ ಹಿತ ದೃಷ್ಟಿ ಬೇಕಿಲ್ಲ. ಕೇವಲ ರಾಜಕೀಯ ನಾಟಕವಾಡುವುದು ಇದರ ಹಿಂದಿನ ಉದ್ದೇಶ ಇದೆ. ಗಡಿ ವಿಚಾರ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ದೊಂಬಿ ಸೃಷ್ಟಿಸುವ ಉದ್ದೇಶ ದಿಂದಲೇ ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬರುತ್ತಿದ್ದಾರೆ.

ಇವರ ಧೋರಣೆಯನ್ನು ಕರ್ನಾಟಕ ಸರಕಾರ ಅರ್ಥ ಮಾಡಿಕೊಂಡಿಕೊಂಡು, ಮಹಾರಾಷ್ಟ್ರದ ಸಚಿವರಿಗೆ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕಿದೆ. ಮಹಾರಾಷ್ಟ್ರ ಸರಕಾರಕ್ಕೆ ನಿಜವಾಗಿಯೂ ತಮ್ಮ ರಾಜ್ಯದ ಜನರ ಮೇಲೆ ಕಾಳಜಿ ಇದ್ದಿದ್ದರೆ, ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿರುವ ಜತ್ತ, ಅಕ್ಕಲಕೋಟ ಜನರಿಗೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಅದು ಬಿಟ್ಟು ರಾಜ್ಯ ಸರಕಾರ ಮನವಿ ಮಾಡಿದರೂ ಬೇಕಂತಲೇ ಬೆಳಗಾವಿಗೆ ಭೇಟಿ ನೀಡಿ, ಗಲಭೆ ಸೃಷ್ಟಿಸುವುದು ಸರಿಯಲ್ಲ. ಒಂದು ವೇಳೆ ಹಾಗೆ ಅವರು ಭೇಟಿ ನೀಡಿದ್ದೇ ಆದರೆ ರಾಜ್ಯ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಎರಡೂ ರಾಜ್ಯದವರು ಪರಸ್ಪರ ಹೊಂದಾಣಿಕೆಯಿಂದ ನೆಲೆಕಂಡುಕೊಂಡು ನೆಮ್ಮದಿಯಿಂದ ಬದುಕುತ್ತಿzರೆ. ಇಂತಹ ಸಂದರ್ಭದಲ್ಲಿ ರಾಜಕೀಯ
ಹಿತಾಸಕ್ತಿಗಾಗಿ ಜನರ ನೆಮ್ಮದಿ ಕೆಡಿಸುವುದು ಸರಿಯಲ್ಲ. ದೇಶ ಒಂದು, ನಾವೆಲ್ಲರೂ ಒಂದು ಎನ್ನುವ ಮನೋಭಾವದಿಂದ ಬದುಕಬೇಕು ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಗಡಿ ವಿಚಾರವಾಗಿ ಎರಡೂ ರಾಜ್ಯದ ರಾಜಕೀಯ ನಾಯಕರು ಪ್ರಚೋದನ ಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.