ಭಾರತೀಯರೆಲ್ಲರಿಗೂ ಸಂಕ್ರಾಂತಿ ಮಹತ್ವದ ಹಬ್ಬ. ಆದರೆ ಹಬ್ಬವೂ ಇಂದು ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪ ಗಳಿಗೆ ಈಡಾಗುತ್ತಿರುವುದು ದುರಂತ. ಮಕರ ಸಂಕ್ರಾಂತಿ ದೇಶದ ವೈವಿಧ್ಯತೆ ಮತ್ತು ನಮ್ಮ ಸಂಪ್ರದಾಯಗಳ ಮಹತ್ವವನ್ನು ತಿಳಿಸುವ ಜತೆಗೆ ಪ್ರಕೃತಿ ಮಾತೆಯನ್ನು ಗೌರವಿಸುವ ಹಬ್ಬವಾಗಿದೆ ಎಂಬುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಹೊಸ ಉತ್ಸಾಹವನ್ನು ತುಂಬಲಿ ಎಂದು ಪ್ರಧಾನಿ ಹಾರೈಸಿದ್ದಾರೆ. ಮತ್ತೊಂದೆಡೆ ರಾಹುಲ್ ಗಾಂಧಿ ತಮಿಳು ನಾಡಿನ ಜಲ್ಲಿಕಟ್ಟನ್ನು ತಮ್ಮ ಆರೋಪಕ್ಕೆ ಅಸವನ್ನಾಗಿ ಬಳಸಿಕೊಳ್ಳುವ ಮೂಲಕ ವಿವಾದಿತ ಹೇಳಿಕೆ
ನೀಡಿದ್ದಾರೆ. ಈ ಮೂಲಕ ಇದೀಗ ಹಬ್ಬಕ್ಕೂ ರಾಜಕೀಯ ಸೋಂಕು ತಗುಲಿದಂತಾಗಿದೆ. ಹಬ್ಬದ ಪ್ರಯುಕ್ತ ತಮಿಳುನಾಡಿನ ಮಧುರೈಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಜಲ್ಲಿಕಟ್ಟು’ ಕ್ರೀಡೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪಕ್ಷದ ಬೆಂಬಲ ಸೂಚಿಸಿದ್ದಾರೆ.
ಮುಂಬರುವ ತಮಿಳುನಾಡಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ. ಹಬ್ಬದ ಆಚರಣೆಯೊಂದು
ಇದೀಗ ರಾಜಕೀಯ ವಸ್ತುವಾಗಿ ಮಾರ್ಪಟ್ಟಿದೆ. ಜಲ್ಲಿಕಟ್ಟು ಕ್ರೀಡೆಯ ವಿರುದ್ಧ ನಿಲುವನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಇದೀಗ ತನ್ನ ನಿಲುವು ಬದಲಿಸಿದಂತಾಗಿದೆ. ತಮಿಳುನಾಡು ಜನತೆಯ ಭಾವನೆಗಳಿಗೆ ಸ್ಪಂದಿಸುವ ಮೂಲಕ ಜನತೆಗೆ ಆಪ್ತವಾಗಲು ಕಾಂಗ್ರೆಸ್ ಅನುಸರಿಸುತ್ತಿರುವ ನೀತಿ ಎಂಬ ಹೇಳಿಕೆಗಳು ಕೇಳಿಬರುತ್ತಿದ್ದು, ಜಲ್ಲಿಕಟ್ಟು ಹೆಸರಿನಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಗೊಂಡಿದೆ.
ಸಂಸ್ಕೃತಿಯನ್ನು ಬಿಂಬಿಸುವ ಹಬ್ಬದ ಹೆಸರಿನಲ್ಲೂ ರಾಜಕೀಯ ವಿವಾದಗಳು ಸೃಷ್ಟಿಯಾಗುತ್ತಿರುವುದು ವಿಷಾದನೀಯ ಸಂಗತಿ.