ಪ್ರಧಾನಿಗೇ ರೋಪು ಹಾಕಿದ್ದರು! ಹದ ತಪ್ಪಿ ಆಡುವ ಮಾತುಗಳಿಂದಾಗಿ ಏನೆಲ್ಲಾ ಪಾಡು ಪಡಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು. ಅದರಲ್ಲೂ, ಅಂತಾರಾಷ್ಟ್ರೀಯ ಬಾಂಧವ್ಯಗಳ ವಿಷಯದಲ್ಲಿ ಮಾತನಾಡುವಾಗ ಎಷ್ಟು ಎಚ್ಚರ ದಿಂದಿದ್ದರೂ ಸಾಲದು. ಒಂದಿಡೀ ದೇಶದ ಪ್ರಜೆಗಳ ಭಾವನೆ ಮತ್ತು ಧೋರಣೆಗಳನ್ನು ಪ್ರತಿನಿಽಸುವ ಪ್ರಧಾನಿ ಅಥವಾ ರಾಷ್ಟ್ರಾಧ್ಯಕ್ಷರು ಈ ವಿಷಯದಲ್ಲಿ ಒಂದು ಗುಲಗಂಜಿ ತೂಕ ಹೆಚ್ಚೇ ವಿವೇಚನೆ ಮೆರೆಯಬೇಕಾಗುತ್ತದೆ.
ಆದರೆ, ಜಾಗತಿಕ ಭೂಪಟದಲ್ಲಿ ಒಂದು ಬಿಂದುವಿನಂತೆ ಗೋಚರಿಸುವಷ್ಟು ಭೌಗೋಳಿಕ ವ್ಯಾಪ್ತಿ ಹೊಂದಿರುವ ಮಾಲ್ಡೀವ್ಸ್ ದೇಶದ ಅಧ್ಯಕ್ಷರು ಭಾರತದ ಕುರಿತಾಗಿ ಆಡಿದ ತುಟಿಮೀರಿದ ಮಾತು ಅವರಿಗೀಗ ದುಬಾರಿಯಾಗಿ ಪರಿಣಮಿಸಿದೆ. ಹೊಸದಾಗಿ ಚುನಾಯಿತರಾಗಿ ಗದ್ದುಗೆಯೇರುತ್ತಿದ್ದಂತೆ, ತಮ್ಮ ನೆಲದಲ್ಲಿ ಬೀಡುಬಿಟ್ಟಿರುವ ಭಾರತೀಯ ಸೇನೆಯನ್ನು ‘ದೇಶದಿಂದ ತೊಲಗಿ’ ಎಂದು ಹೇಳುವ ಧಾಟಿಯಲ್ಲಿ ಅವರು ವರ್ತಿಸಿದ್ದು, ಬೆನ್ನಿಗೆ ಚೀನಾ ನಿಂತಿದೆ ಎಂಬ ಭಂಡಧೈರ್ಯದಲ್ಲಿ ತಮ್ಮ ಠೇಂಕಾರದ ಮಾತುಗಳನ್ನು ಸಮರ್ಥಿಸಿಕೊಂಡಿದ್ದು ಮಾಲ್ಡೀವ್ಸ್ ದೇಶದ ಜನರಿಗೇ ಇಷ್ಟವಾಗಿಲ್ಲ.
ಅದರಲ್ಲೂ ನಿರ್ದಿಷ್ಟವಾಗಿ ಭಾರತವನ್ನು ವಿನಾಕಾರಣ ಅವಮಾನಿಸಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಭಾರತೀಯರಲ್ಲಿ ಕ್ಷಮೆ ಕೋರುವಂತೆ ಮುಯಿಝು ಅವರನ್ನು ವಿಪಕ್ಷಗಳು ಆಗ್ರಹಿಸುತ್ತಿರುವ ಸುದ್ದಿ ಬಂದಿದೆ. ‘ನೆರೆಹೊರೆಯ ದೇಶಕ್ಕೆ ಸಂಬಂಽಸಿ ಮಾತಾಡುವಾಗ ಪರಸ್ಪರ ಬಾಂಧವ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಚ್ಚರ ವಹಿಸಬೇಕು’ ಎಂಬ ಬುದ್ಧಿಮಾತು ಈ ಆಗ್ರಹದಲ್ಲಿ ಹರಳುಗಟ್ಟಿದೆ ಎಂಬುದು ಗಮನಿಸಬೇಕಾದ ಸಂಗತಿ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿದೇಶಿ ನೆಲಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಾಗ ಹೊಮ್ಮುವ ಕಾಲೆಳೆಯುವಂಥ ಪ್ರಶ್ನೆಗಳಿಗೂ ಖಡಕ್ಕಾಗಿ ಉತ್ತರಿಸಿದ್ದಿದೆ; ಅಂತಾರಾಷ್ಟ್ರೀಯ ಬಾಂಧವ್ಯಗಳ ಕುರಿತಾದ ಇಂಥ ಪ್ರಶ್ನೆಗಳಿಗೆ ಜೈಶಂಕರ್ ನೀಡುವ ಸಮರ್ಥನೆಯನ್ನು ವಿದೇಶಿ ಸಮುದಾಯವೂ ಒಪ್ಪಿಕೊಂಡಿದ್ದಿದೆ. ಈ ಮಾತುಗಳಲ್ಲಿ ದೇಶಾಭಿಮಾನ ಅಡಗಿರುತ್ತದೆಯೇ ವಿನಾ ಠೇಂಕಾರವಲ್ಲ.
ಆದರೆ ಮಾಲ್ಡೀವ್ಸ್ ಅಧ್ಯಕ್ಷರ ಮಾತುಗಳನ್ನು ಅವರ ದೇಶದವರೇ ಒಪ್ಪಿಲ್ಲ. ಇದು ಮುಯಿಝು ಅವರಿಗಿನ್ನೂ ಅರ್ಥವಾಗದಿರುವುದು ವಿಪರ್ಯಾಸ!