ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿ, ಹಳ್ಳ-ಕೊಳ್ಳ, ತೊರೆ ಗಳು ತುಂಬಿ ಹರಿಯುತ್ತಿವೆ. ಇವುಗಳಿಂದ ಸೃಷ್ಟಿಯಾಗುವ ಜಲಪಾತಗಳ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಧಾವಿಸಿ ಬರುವುದು ಸಾಮಾನ್ಯ.
ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗಕ್ಕೇ ಪ್ರವಾಸಿಗರು ಹೋಗುವುದು ಸಾಮಾನ್ಯ. ಆದರೆ ಸಧ್ಯದ ಅಲ್ಲಿನ ಪರಿಸ್ಥಿತಿ ಸರಿ ಇಲ್ಲ. ಭೂಕಂಪನದಿಂದಾಗಿ ಅನೇಕ ಕಡೆ ಕಣಿವೆ ಪ್ರದೇಶಗಳಲ್ಲಿ ಗುಡ್ಡ ಕುಸಿತ ದಂತಹ ಪ್ರಕರಣಗಳು ಸಂಭವಿವೆ. ರಾತ್ರಿಯೇ ಓಡಾಡಕ್ಕೆ ಮುಕ್ತವಾಗಿದ್ದ ಸೇತುವೆಗಳು ಬೆಳಗ್ಗೆಯಷ್ಟರಲ್ಲಿ ಜಲಾವೃತವಾಗಿವೆ. ಹೀಗಾಗಿ ಅಲ್ಲಿಗೆ ಪ್ರವಾಸಕ್ಕೆ ಹೋಗದೇ ಇರುವುದೇ ಒಳ್ಳೆಯದು. ಮೈಮರೆತು ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲಿ ತೆಗೆದುಕೊಳ್ಳುವುದು, ನೀರಿಗೆ ಇಳಿದು ಆಟ ಆಡುವುದು, ಜಲಪಾತದ ತುದಿಯ ಬಂಡೆಗಳ ಮೇಲೆ ನಿಂತು ಸೆಲಿ ಕ್ಲಿಕ್ಕಿಸಿ ಕೊಳ್ಳುವುದು, ನೀರಿನ ಆಳ ಲೆಕ್ಕಿಸದೆ ಈಜಲು ಇಳಿಯುವುದು ಪ್ರವಾಸಿಗರ ಸಾಮಾನ್ಯ ಆಟಗಳು.
ಅವುಗಳಿಗೆಲ್ಲ ಕಡಿವಾಣ ಹಾಕಿ, ಪ್ರವಾಸಿ ಸ್ಥಳಗಳಲ್ಲಿ ಜವಾಬ್ದಾರಿಯಿಂದ ವರ್ತಿಸಿ, ತಮ್ಮ ಪ್ರವಾಸವನ್ನು ಸುಖಮಯಗೊಳಿಸಿ ಕೊಳ್ಳಬೇಕು. ಅಥವಾ ಮಳೆಗಾಲ ಮುಗಿಯುವವರೆಗೂ ಪ್ರವಾಸವನ್ನು ಮುಂದೂಡಿದರೆ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಇನ್ನು ಹಲವೆಡೆ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಅಲ್ಲಿಯೇ ಬೈಕ್ ಓಡಿಸುವುದು, ಅಲ್ಲಿಯೇ ಜಾನುವಾರುಗಳನ್ನು ತೊಳೆಯುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಎಲ್ಲ ಕಡೆಯೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸ್ಥಳೀಯ ಆಡಳಿತ ಅಥವಾ
ಗ್ರಾಮಸ್ಥರೇ ಇಂತಹ ಆಟಾಟೋಪಗಳಿಗೆ ಸ್ಥಳೀಯವಾಗಿ ಕಡಿವಾಣ ಹಾಕಬೇಕು. ಇನ್ನು ಯಾವುದೇ ಯಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿ, ಅಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು ಇರುವಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಯ ಹೊಣೆ. ದುರ್ಗಮ ಪ್ರದೇಶದಲ್ಲಿರುವ ಯಾತ್ರೆಗಳಿಗೆ ಹೋಗದೇ ಇದ್ದರೇ ಒಳ್ಳೆಯದು.
ಇತ್ತೀಚೆಗೆ ಅಮರನಾಥನ ದರ್ಶನಕ್ಕೆ ತೆರಳಿದ್ದ ಯಾತ್ರಿಕರಲ್ಲಿ ಕೆಲವರು ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇದು, ಇಂತಹ ಯಾತ್ರೆಗಳ ಸಂದರ್ಭದಲ್ಲಿ ಉಂಟಾಗುವ ಪ್ರಕೃತಿ ವಿಕೋಪವು ತಂದಿಡಬಹುದಾದ ಅಪಾಯ ಎಷ್ಟು ಎಂಬುದನ್ನು ತೋರಿಸಿದೆ. ಆದ್ದರಿಂದ ಮಳೆಗಾಲದ ಪ್ರವಾಸದಲ್ಲಿ ಇರಲಿ ಎಚ್ಚರ.