ಸರಕಾರ ಮತ್ತು ಮಾಧ್ಯಮಗಳು ಎಂದಿಗೂ ಎರಡು ವಿರುದ್ಧ ದಿಕ್ಕುಗಳಂತೆಯೇ ಕಾಣುತ್ತದೆ. ಆದರೆ ಮಾಧ್ಯಮಗಳು ಸರಕಾರದ
ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರಪಡಿಸುವಷ್ಟೇ ಲೋಪಗಳಿಗೂ ಆದ್ಯತೆ ನೀಡುತ್ತವೆ.
ಇದು ಮಾಧ್ಯಮಗಳಿಗಿರುವ ಜವಾಬ್ದಾರಿ. ಕೋವಿಡ್ ಸಂದರ್ಭದಲ್ಲಿ ಸರಕಾರ ಮತ್ತು ಜನರ ನಡುವೆ ಸಮನ್ವಯತೆ ಮೂಡುವಲ್ಲಿ
ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಸರಕಾರಿ ಹಾಗೂ ಖಾಸಗಿ ಮಾಧ್ಯಮಗಳೆರಡರ ಆಶಯವೂ ಜನಪರ ಕಾಳಜಿಯೇ ಆಗಿರುತ್ತದೆ. ಇದೀಗ ಸರಕಾರವು ಜನಪರ ಕಾಳಜಿಗಾಗಿ ಕೈಜೋಡಿಸುವಂತೆ ಕರೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಸರಕಾರ ಕರೆ ನೀಡದಿದ್ದರೂ ಮಾಧ್ಯಮಗಳ ನಡೆ ಜನಪರ ಕಾಳಜಿ ನಿಟ್ಟಿನಲ್ಲಿ ಸಾಗಬೇಕಿರುವುದು ಅಗತ್ಯ.
ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸರಕಾರದ ಜತೆಗೆ ಕೈಜೋಡಿಸುವಂತೆ ಖಾಸಗಿ ವಾಹಿನಿಗಳಿಗೆ ಕೇಂದ್ರ ಸರಕಾರ ಕೋರಿದೆ. ನಾಲ್ಕು ರಾಷ್ಟ್ರಮಟ್ಟದ ಸಹಾಯವಾಣಿ ಸಂಖ್ಯೆಗಳನ್ನು ವಾಹಿನಿಯಲ್ಲಿ ಪ್ರದರ್ಶಿಸುವ ಮೂಲಕ ಕೋವಿಡ್ ಟ್ರೀಟ್ಮೆಂಟ್ ಪ್ರೋಟೋಕಾಲ್, ಸೂಕ್ತವಾದ ನಡವಳಿಕೆ ಮತ್ತು ವ್ಯಾಕ್ಸಿನೇಷನ್ ಮೂರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುವಂತೆ ಕೋರಲಾಗಿದೆ.
ಕೋವಿಡ್ ಕಾಣಿಸಿಕೊಂಡ ಆರಂಭದ ದಿನದಿಂದ ಇಂದಿನವರೆಗೂ ಅನೇಕ ಮಾಧ್ಯಮಗಳು ಸೋಂಕಿನ ಕುರಿತಾದ ಮಾಹಿತಿ ಪ್ರಸಾರ ಪಡಿಸುತ್ತಿವೆ. ಪ್ರತಿಯೊಂದು ಬೆಳವಣಿಗೆ ಜತೆಗೆ ತಜ್ಞರಿಂದ ಸಲಹೆ, ವಿಶ್ಲೇಷಣೆ, ಲೋಪಗಳನ್ನೂ ಅನಾವರಣಗೊಳಿಸು ವಲ್ಲಿ ಪ್ರಯತ್ನಿಸುತ್ತಿವೆ. ಮನ್ ಕಿ ಬಾತ್‌ನಂಥ ಯಶಸ್ವಿ ಕಾರ್ಯಕ್ರಮ ಜನಪ್ರಿಯತೆಗೊಳ್ಳುವಲ್ಲಿಯೂ ಮಾಧ್ಯಮದ ಪಾತ್ರ ಮುಖ್ಯ ವಾಗಿದೆ.
ಸರಕಾರಿ ಮಾಧ್ಯಮಗಳೆ ಆಗಲಿ, ಖಾಸಗಿ ಮಾಧ್ಯಮಗಳೆ ಆಗಲಿ ಒಟ್ಟಾರೆ ಮಾಧ್ಯಮಗಳ ಆಶಯ ಸಮಾಜದ ಒಳಿತಿನ ಆಶಯವೇ
ಒಳಗೊಂಡಿರುತ್ತವೆ. ಆದ್ದರಿಂದ ಸರಕಾರಕ್ಕೆ ಸಹಕಾರ ನೀಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಮಹತ್ವದ್ದು. ಪ್ರಸ್ತತ ಸಂದರ್ಭ ದಲ್ಲಿ ಖಾಸಗಿ ಹಾಗೂ ಸರಕಾರಿ ಎಂಬ ವರ್ಗೀಕರಣವಿಲ್ಲದೆ ಕೋವಿಡ್ ನಿರ್ಮೂಲನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿರುವುದು ಎಲ್ಲ ಮಾಧ್ಯಮಗಳ ಜವಾಬ್ದಾರಿ.