Wednesday, 11th December 2024

ವೈದ್ಯಕೀಯ ಶಿಕ್ಷಣ: ವಿನಾಕಾರಣ ಆರೋಪ ಸಲ್ಲ

Mysuru News

ಉಕ್ರೇನ್‌ನಲ್ಲಿ ಸಾವಿಗೀಡಾದ ನವೀನ್ ಸಾವಿನ ನಂತರ ‘ಭಾರತದಲ್ಲಿನ ವೈದ್ಯಕೀಯ ಶಿಕ್ಷಣ’ದ ಕುರಿತು ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಲಕ್ಷಾಂತರ ರುಪಾಯಿ ಕೊಟ್ಟು ಇವರಿಗೆ ನಮ್ಮ ದೇಶದಲ್ಲಿ ಓದಲು ಆಗದಿದ್ದಕ್ಕೆ ವಿದೇಶ ಅರಸಿ ಹೋಗುವುದು. ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ ಎಂಬ ಕಾರಣದಿಂದಲೇ ಇವರೆಲ್ಲ ದೇಶ ಬಿಟ್ಟು ವಿದೇಶಕ್ಕೆ ಹೋಗಿ ಹೆಣವಾಗುತ್ತಿದ್ದಾರೆ ಎಂಬ
ಮಾತುಗಳು ಕೇಳಿ ಬರುತ್ತಿವೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ ಎಂಬುದು ನಿಜವಾದರೂ ಗುಣಮಟ್ಟವನ್ನು ಪರಿಗಣಿಸಿ ದರೆ ಉಕ್ರೇನ್‌ಗಿಂತಲೂ ಭಾರತದ ವೈದ್ಯಕೀಯ ಶಿಕ್ಷಣ ಗುಣಮಟ್ಟದ್ದಾಗಿದೆ.

ಉಕ್ರೇನ್ ನಲ್ಲಿ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆಯೇ ವೈದ್ಯಕೀಯ ಸೀಟು ಗಿಟ್ಟಿಸಿಕೊಳ್ಳಬಹುದು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಶೇ.95ಕ್ಕಿಂತ ಹೆಚ್ಚು ಅಂಕ ಪಡೆದವರಿಗೂ ಇಲ್ಲಿ ಸೀಟು ಸಿಗದಿರುವುದಕ್ಕೆ ಇಲ್ಲಿನ ರಾಜಕಾರಣಿಗಳು ತಮ್ಮ ಮಕ್ಕಳಿಗೆ ಸೀಟು ಕೊಡಿಸಲು ವ್ಯಾಪಾರಕ್ಕಿಳಿಯುವುದೇ ಕಾರಣವಾಗಿದೆಯೇ ವಿನಾಃ ಪ್ರತಿಭೆಗೆ ಬೆಲೆ ಇಲ್ಲವೆಂದಲ್ಲ. ಭಾರತದಲ್ಲಿ ಸದ್ಯ 90 ಸಾವಿರಕ್ಕಿಂತ ಹೆಚ್ಚು ಎಂಬಿಬಿಎಸ್ ಸೀಟುಗಳಿವೆ. 40 ಸಾವಿರಕ್ಕಿಂತ ಹೆಚ್ಚು ಪಿಜಿ ಸೀಟುಗಳಿವೆ. ೨೦೧೪ರ ಬಳಿಕ ಭಾರತದಲ್ಲಿ ಸುಮಾರು ಶೇ.80ರಷ್ಟು ವೈದ್ಯಕೀಯ ಸೀಟುಗಳ ಸಂಖ್ಯೆ ಏರಿದೆ. ಕೇಂದ್ರ ಸರಕಾರದ ಅಂಕಿ ಅಂಶಗಳ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಎಂಬಿಬಿಎಸ್ ಹಾಗೂ 70 ಸಾವಿರ ಪಿಜಿ ಸೀಟುಗಳನ್ನು ಸೃಷ್ಟಿಸಬೇಕಿದೆ.

ಸುಮಾರು 60 ವರ್ಷಗಳಲ್ಲಿ ಭಾರತ ಹೊಂದಿದ್ದ ವೈದ್ಯಕೀಯ ಸೀಟುಗಳ ಎರಡೂವರೆ ಪಟ್ಟು ಸೀಟುಗಳು ನಂತರದ ಒಂದು ದಶಕದಲ್ಲಿ ಹೊಂದಲಿದೆ. ಇನ್ನು ನೀಟ್ ಪರೀಕ್ಷೆ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿವೆ. ನೀಟ್‌ನಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಆದರೆ ನೀಟ್‌ನ್ನು ವಿರೋಧಿಸಿಕೊಂಡು ಬಂದಿರುವ ತಮಿಳುನಾಡಿನಲ್ಲಿಯೂ ಪ್ರತಿ
ವರ್ಷ ವೈದ್ಯಕೀಯ ಕೋರ್ಸ್‌ಗೆ 30-40 ಸಾವಿರ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಿದ್ದಾರೆ. ಅವರಲ್ಲಿ ಎಂಬಿಬಿಎಸ್ ಸೀಟು ಸಿಗುತ್ತಿರುವುದು ಕೇವಲ 8-9 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ. ನೀಟ್ ಪಾರದರ್ಶಕವಾಗಿಲ್ಲದಿದ್ದರೆ ತನುಜಾ ಎಂಬ ಹಳ್ಳಿಗಾಡಿನ ಹುಡುಗಿಗೆ ವೈದ್ಯಕೀಯ ಸೀಟು ಸಿಗುತ್ತಿರಲಿಲ್ಲ.