ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಮೂರು ಸಂಪುಟ ದರ್ಜೆ ಮತ್ತು ಎರಡು ರಾಜ್ಯ ಖಾತೆಯ ಹುದ್ದೆಗಳು ಸೇರಿ ಐದು ಸಚಿವ ಸ್ಥಾನಗಳು ದೊರೆತಿವೆ. ಖಾತೆಯ ಮಹತ್ವದ ದೃಷ್ಟಿಯಿಂದ ಇವೆಲ್ಲವೂ ಉತ್ತಮವಾದ ಖಾತೆಗಳು. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಮತ್ತು ಸೋಮಣ್ಣ ಅವರಿಗೆ ಒಂದಕ್ಕಿಂತ ಹೆಚ್ಚು ಖಾತೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ನಿರೀಕ್ಷೆಯಂತೆ ಎರಡನೇ ಬಾರಿಗೆ ಹಣಕಾಸು ಖಾತೆ ದೊರೆತಿದೆ. ಹಿಂದಿನ ಸರಕಾರದಲ್ಲಿ ಸಂಸದೀಯ ಖಾತೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಈ ಬಾರಿ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ, ಖಾತೆಗಳ ಜೊತೆಗೆ ನವೀಕರಿಸಬಹುದಾದ ಇಂಧನ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಕೃಷಿ ಖಾತೆಯನ್ನು ಬಯಸಿದ್ದ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಇಷ್ಟೇ ಮಹತ್ವದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಹೊಣೆ ವಹಿಸಲಾಗಿದೆ.
ಕಳೆದ ಸಚಿವ ಸಂಪುಟದಲ್ಲಿ ಕೃಷಿ ಖಾತೆ ಸಹಾಯಕ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಎಂಎಸ್‌ಎಂಇ ಖಾತೆಯನ್ನು ವಹಿಸಲಾಗಿದೆ. ಸೋಮಣ್ಣ ಅವರಿಗೆ ಮಹತ್ವದ ಜಲಶಕ್ತಿ ಮತ್ತು ರೈಲ್ವೆ ಖಾತೆಯ ಜವಾಬ್ದಾರಿ ದೊರೆತಿದೆ. ಈ ಎಲ್ಲ ಖಾತೆಗಳು ರಾಜ್ಯದ ಹಿತ ಕಾಯಲು ಪೂರಕವಾಗಿವೆ. ವಿಶೇಷವಾಗಿ ಹಣಕಾಸು, ಉಕ್ಕು, ಪಡಿತರ, ಜಲಶಕ್ತಿ, ರೈಲ್ವೆ, ಎಂಎಸ್‌ಎಂಇ ಸಚಿವಾಲಯಗಳ ಮೂಲಕ ರಾಜ್ಯದಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿ ರುವ ಯೋಜನೆಗಳಿಗೆ ಚಾಲನೆ ನೀಡಲು ಸಾಧ್ಯವಿದೆ. ಕೇಂದ್ರ ಸಚಿವರು ಇಡೀ ದೇಶಕ್ಕೆ ಸಚಿವರಾಗಿದ್ದು ರಾಷ್ಟ್ರದ ಸಮಗ್ರ ಅಭಿವೃದ್ಧಿಯತ್ತ ಅವರು ಗಮನಹರಿಸಬೇಕೆಂಬ ಮಾತುಗಳಿದ್ದರೂ, ಆಯಾ ರಾಜ್ಯದ ಸಚಿವರು ತಮ್ಮ ರಾಜ್ಯದ ಯೋಜನೆಗಳಿಗೆ ಆದ್ಯತೆ ನೀಡುತ್ತಾ ಬಂದಿರುವುದು ಸುಳ್ಳಲ್ಲ.
ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ಸಚಿವ ಸ್ಥಾನಕ್ಕೇರಿದವರು ತಮ್ಮ ರಾಜ್ಯದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ. ಆದರೆ ಕನ್ನಡಿಗ ಮಂತ್ರಿಗಳು ದಾಕ್ಷಿಣ್ಯಪರರು. ಪಟ್ಟು ಹಿಡಿದು ಕನ್ನಡ ನೆಲದ ಕೆಲಸಗಳಿಗೆ ಪ್ರಾಮುಖ್ಯತೆ ನೀಡಿದ್ದು ಕಡಿಮೆ. ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಎರಡನೇ ಬಾರಿಗೆ ಆಯ್ಕೆಯಾದರೂ ರಾಜ್ಯದ ಹಿತರಕ್ಷಣೆಗಾಗಿ ಎಂದೂ ಕೈ ಜೋಡಿಸಿಲ್ಲ. ಉಳಿದ ಸಚಿವ ರಾದರೂ,ರಾಜ್ಯದ ಒಳಿತಿಗಾಗಿ ಟೊಂಕ ಕಟ್ಟಿ ಕೆಲಸ ಮಾಡಬೇಕು. ವಿಶೇಷವಾಗಿ ಕುಮಾರಸ್ವಾಮಿ ಅವರ ಮೇಲೆ ಬಹಳಷ್ಟು ನಿರೀಕ್ಷೆ ಇದೆ.
ಸೋಮಣ್ಣ ಅವರು ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಲು ಸ-ಲರಾಗಬೇಕಿದೆ. ಶೋಭಾ ಅವರು ಬೆಂಗಳೂರು ಮತ್ತು ಇತರ ನಗರಗಳಲ್ಲಿ ಸಣ್ಣ ಉದ್ಯಮಗಳ ಪುನಶ್ಚೇತನಕ್ಕೆ ಉತ್ತೇಜನ ನೀಡಬೇಕಿದೆ.