Saturday, 14th December 2024

ಅಮೆರಿಕಕ್ಕೆ ಭಾರತದ ಸಖ್ಯ ಈಗ ಅನಿವಾರ್ಯ

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಹಲವು ದೃಷ್ಟಿಯಿಂದ ಮಹತ್ವಪೂರ್ಣ ವೆನಿಸಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ನಿರ್ಮಾಣ ವಾಗುತ್ತಿರುವ ತ್ವೇಷಮಯ ಸನ್ನಿವೇಶದಲ್ಲಿ ಮೋದಿ ಹಾಗೂ ಬೈಡನ್ ಭಾಯೀಭಾಯಿಗಳಾಗಿ ಕೈ ಕುಲುಕಿರುವುದು ಸಹಜವಾಗಿ ಜಾಗತಿಕ ಗಮನ ಸೆಳೆದಿದೆ. ಇದಕ್ಕೆ ಕಾರಣಗಳು ಹಲವು.

ಒಂದೆಡೆ ದಿನದಿಂದ ದಿನಕ್ಕೆ ಭಾರತದ ವಿದೇಶಾಂಗ ನೀತಿ ಗಮನ ಸೆಳೆಯುತ್ತಿದ್ದು, ಭಾರತ ಎಲ್ಲ ದೃಷ್ಟಿಯಿಂದಲೂ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಅಮೆರಿಕಕ್ಕೆ ಸಡ್ಡು ಹೊಡೆದು ಬೆಳೆಯುತ್ತಿರುವ ಚೀನಾ ಜಗತ್ತಿನ ಸೂಪರ್ ಪವರ್ ಆಗಲು ಪೈಪೋಟಿಗೆ ಬಿದ್ದಿದೆ. ಇದೇ ಸಂದರ್ಭದಲ್ಲಿ ಚೀನಾ ಹಾಗೂ ಪಾಕಿಸ್ತಾನಗಳ ಜತೆಗಿನ ಸಂಘರ್ಷ ವನ್ನು ಎದುರಿಸಲು ಶಸಾಸ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತಕ್ಕೂ ಅಮೆರಿಕದಂಥ ಬಲಿಷ್ಠ ರಾಷ್ಟ್ರದ ನೆರವು ಅಗತ್ಯ. ಇಂಥ ಸನ್ನಿವೇಶದಲ್ಲಿ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಮೋದಿಯವರ ಭೇಟಿ, ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ಸಂಘರ್ಷಕ್ಕೆ ಹಾಡುತ್ತಿರುವ ನಾಂದಿ ಎಂಬ ಮಾತು ಗಳೂ ಕೇಳಿ ಬರುತ್ತಿವೆ.

ಭಾರತ ಮೊದಲಿಂದಲೂ ಶಾಂತಿಪ್ರಿಯ ರಾಷ್ಟ್ರವಾಗಿದ್ದು, ಯುದ್ಧದ ವಿಚಾರದಲ್ಲಿ ತಟಸ್ಥ ನೀತಿಯನ್ನೇ ಪಾಲಿಸಿಕೊಂಡು ಬರುತ್ತಿದೆ. ಹಾಗಿದ್ದಾಗ್ಯೂ ಹೊರಗಿನ ದಾಳಿ ಎದುರಾದಲ್ಲಿ, ದಿಟ್ಟ ಉತ್ತರ ನೀಡುವಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಯುವ ಅಥವಾ ಹಿಂದಿನಂತೆ ಬೇರೆಯವರ ಮರ್ಜಿ ಕಾಯಬೇಕಾದ ಸ್ಥಿತಿಯಲ್ಲಿ ಈಗ ಭಾರತ ಉಳಿದಿಲ್ಲ. ಇನ್ನೊಂದೆಡೆ ಉಕ್ರೇನ್ ಜತೆಗಿನ ಯುದ್ಧದಿಂದ ಕಂಗಾಲಾಗಿರುವ ರಷ್ಯಾ, ಭಾರತಕ್ಕೆ ಅಗತ್ಯ ಶಸಾಸಗಳನ್ನು ರಪ್ತು ಮಾಡುವಷ್ಟು ಸಮರ್ಥವಾಗುಳಿದಿಲ್ಲ.

ಹೀಗಾಗಿ ನೆರೆಯ ಬೆದರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಅಮೆರಿಕದ ನೆರವು ಬೇಕೇಬೇಕಿದೆ. ಸಮರವಲ್ಲದೇ ವ್ಯಾಪಾರದ ದೃಷ್ಟಿಯಿಂದಲೂ
ಭಾರತವು ಅಮೆರಿಕಕ್ಕೆ ಮಹತ್ವದ ಗೆಳೆಯನಾಗಿ ನಿಲ್ಲುವುದು ಅನಿವಾರ್ಯ. ಚೀನಾ ಈಗಾಗಲೇ ದಕ್ಷಿಣ ಸಮುದ್ರದ ಜಪಾನ್, ಇಂಡೋನೇಷ್ಯಾ,
ಮಲೇಷ್ಯಾ ಮತ್ತು ನೇಪಾಳ , ಮ್ಯಾನ್ಮಾರ್ ಜತೆ ಸಂಘರ್ಷ ಸಾರಿದ್ದು, ಸಹಜ ವಾಗಿ ಅದರ ಆಕ್ರಮಣಕಾರಿ ನಡೆ ಭಾರತ ಮಾತ್ರವಲ್ಲ, ಅಮೆರಿಕ, ಆಸ್ಟ್ರೇಲಿಯಾಕ್ಕೂ ಬೆದರಿಕೆಯೊಡ್ಡುತ್ತಿದೆ. ಇದರ -ಲವೇ ಭಾರತವನ್ನೂ ಒಳಗೊಂಡ ಕ್ವಾಡ್ ಒಪ್ಪಂದ. ಹೇಗೆ ನೋಡಿದರೂ ಕಾಲ- ಸನ್ನಿವೇಶ ಬದಲಾಗಿದೆ.

ಶೀತಲ ಸಮರ ಕಾಲದಲ್ಲಿ ಪಾಕ್ ಕಡೆ ನಿಂತಿದ್ದ ಅಮೆರಿಕ ಈಗ ಅನಿವಾರ್ಯವಾಗಿ ಭಾರತವನ್ನು ಹೊಗಳಲೇ ಬೇಕು. ಮೋದಿ ನಾಯಕತ್ವದಲ್ಲಿ
ಅಮೆರಿಕವೊಂದೇ ಅಲ್ಲ ಅದರ ನಾಯಕತ್ವದಲ್ಲಿನ ಬಲಾಢ್ಯ ದೇಶಗಳೆಲ್ಲರಿಗೆ ಮೋದಿ ನೇತೃತ್ವದ ಭಾರತದ ಸಖ್ಯ ಅನಿವಾರ್ಯ.