ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ ೬ ತಿಂಗಳಿಂದ ೩ ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ, ಪೋಷಣೆ ಮಾಡುವ ಉದ್ದೇಶದಿಂದ ರಾಜ್ಯ ಸರಕಾರವು ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ.
ಈ ಮೂಲಕ ರಾಜ್ಯ ಸರಕಾರವು ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಜವಾಬ್ದಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ. ಯೋಜನೆಯ ಉದ್ದೇಶ ಸರಿಯಾಗೇನೋ ಇದೆ. ಆದರೆ ಕೂಸಿನ ಮನೆ ಅನುಷ್ಠಾನಕ್ಕಾಗಿ ಮೇಲಽಕಾರಿಗಳು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಒತ್ತಡ ಹಾಕುತ್ತಿದ್ದಾರೆ ಎಂಬ ದೂರು ಗಳು ಕೇಳಿ ಬರುತ್ತಿವೆ. ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳಿಗೆ ಈಗಲೇ ಮಾಡಲು ಸಾಕಷ್ಟು ಕೆಲಸಗಳಿವೆ. ಈ ನಡುವೆ ಮತ್ತಷ್ಟು ಒತ್ತಡ ಹೇರುವುದು ಸರಿಯಲ್ಲ.
ಯಾವುದೇ ಅಧಿಕಾರಿಗಳು ಸರಕಾರದ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಆದರೆ ಜನಪ್ರತಿನಿಽಗಳು ಪಿಡಿಒಗಳ ಮೇಲೆ ಒತ್ತಡ ಹೇರಿ ಕಾನೂನು ಬಾಹಿರವಾಗಿ ಕೆಲಸ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಸರಕಾರದ ನಿಯಮದಂತೆ ನಡೆದುಕೊಂಡರೆ ಸ್ಥಳೀಯ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಈಗಾಗಲೇ ಪಿಡಿಒ ಮತ್ತು ಗ್ರಾಪಂ ಸದಸ್ಯರ ನಡುವಿನ ತಿಕ್ಕಾಟಗಳು ಹೆಚ್ಚಾಗಿವೆ.
ಕಾಮಗಾರಿಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಿಡಿಒಗಳನ್ನೇ ಗುರಿ ಮಾಡಲಾಗುತ್ತಿದೆ. ಇದರಿಂದಾಗಿ ಪಿಡಿಒಗಳ ಪರಿಸ್ಥಿತಿ ದುಸ್ತರವಾಗಿದೆ. ಈ ನಡುವೆ ಕೂಸಿನ ಮನೆ ಯೋಜನೆಯ ಜವಾಬ್ದಾರಿಯನ್ನೂ ಪಿಡಿಒಗಳ ಮೇಲೆ ಹೇರುವುದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ ಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಮೊದಲು ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಿದೆ. ಅಂದಾಗಲೇ ಸೌಲಭ್ಯಗಳು ನೇರವಾಗಿ ಗ್ರಾಮೀಣ ಮಟ್ಟದಲ್ಲಿ ಜನತೆಗೆ ತಲುಪಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ವ್ಯತಿರಿಕ್ತ ವಾತಾವರಣ ಇದ್ದರೆ ಸಾಕಷ್ಟು ಅನಾನುಕೂಲವಾಗಲಿದೆ.