Friday, 13th December 2024

ನಕ್ಸಲೀಯರಿಗೆ ತಕ್ಕ ಪಾಠ

ಛತ್ತೀಸ್‌ಗಡದ ಕಂಕೇರ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ೨೯ ಮಾವೋವಾದಿಗಳನ್ನು ಹತ್ಯೆ
ಮಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದಾಖಲೆಯೇ ಆಗಿದೆ.

ಸಾಮಾನ್ಯವಾಗಿ ಛತ್ತೀಸ್‌ಗಡದಲ್ಲಿ ನಕ್ಸಲೀಯರ ಬಾಂಬ್ ಅಥವಾ ಬಂದೂಕು ದಾಳಿಯಿಂದಾಗಿ ಭದ್ರತಾ ಪಡೆಗಳ ಸಿಬ್ಬಂದಿಯೇ ಹೆಚ್ಚು ಹುತಾತ್ಮರಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿ ನಕ್ಸಲೀಯರ ಸದ್ದು ಅಡಗಿಸಲು ಭದ್ರತಾ ಪಡೆಗಳು ಟೊಂಕ ಕಟ್ಟಿ ನಿಂತಿದ್ದು, ಇದರ ಫಲವಾಗಿಯೇ ಮಂಗಳವಾರ ಪ್ರಮುಖ ನಾಯಕ ಶಂಕರ ರಾವ್ ಸೇರಿ ೨೯ ಮಂದಿ ಸತ್ತಿದ್ದಾರೆ.

ಹಿಂದಿನಿಂದಲೂ ಛತ್ತೀಸ್‌ಗಡ ನಕ್ಸಲೀಯರಿಂದಾಗಿ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಹಲವಾರು ರಾಜಕೀಯ ನಾಯಕರೂ ನಕ್ಸಲೀಯರಿಂದಾಗಿ ಮೃತರಾಗಿದ್ದಾರೆ. ಕಂಕೇರ್, ಬಸ್ತಾರ್ ಪ್ರದೇಶದಲ್ಲಿ ಇವರ ಹಾವಳಿ ಹೆಚ್ಚಿದ್ದು, ಬೇರೆ ಎಲ್ಲ ರಾಜ್ಯಗಳಿಗಿಂತ ಇಲ್ಲೆ ಹೆಚ್ಚು ಪ್ರಭಾವ ಬೆಳೆಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ನಕ್ಸಲೀಯರ ವಿರುದ್ಧ ಭದ್ರತಾ ಪಡೆಗಳ ಸಮರ ಹೆಚ್ಚಾಗಿದೆ. ಹೀಗಾಗಿಯೇ, ಇಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ೮೦ ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಈ ತಿಂಗಳ ಆರಂಭದ ೧೩ ನಕ್ಸಲೀಯರನ್ನು ಕಾರ್ಯಾಚರಣೆಯಲ್ಲಿ ಸದೆಬಡಿಯಲಾಗಿತ್ತು.

ಮಂಗಳವಾರದ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಮಾತನಾಡಿದ್ದು, ಕಳೆದ ಮೂರು ತಿಂಗಳ ಲೆಕ್ಕಾಚಾರ ನೀಡಿದ್ದಾರೆ. ಈ ಅವಧಿಯಲ್ಲಿ ೮೦ ನಕ್ಸಲೀಯರು ಹತರಾಗಿದ್ದರೆ, ೧೨೫ ನಕ್ಸಲೀಯರನ್ನು ಬಂಧಿಸಲಾಗಿದೆ. ೧೫೦ ನಕ್ಸಲೀಯರು
ಶರಣಾಗಿದ್ದಾರೆ. ನಾವು ಈ ರಾಜ್ಯದಲ್ಲಿ ನಕ್ಸಲ್ ಪಿಡುಗು ಕೊನೆಗಾಣಿಸಲು ಸರ್ವರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ.

ಇತಿಹಾಸ ನೋಡಿದರೆ, ೨೦೦೯ರಲ್ಲಿ ೫೦, ೨೦೧೬ರಲ್ಲಿ ೨೪, ೨೦೧೮ರಲ್ಲಿ ೩೭, ೨೦೨೧ರಲ್ಲಿ ೨೧ ನಕ್ಸಲೀಯರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಇವೇ ದೊಡ್ಡ ಮಟ್ಟದ ಕಾರ್ಯಾಚರಣೆಗಳಾಗಿವೆ. ಇದಷ್ಟೇ ಅಲ್ಲ, ಛತ್ತೀಸ್‌ಗಡ, ಒಡಿಶಾ ಮತ್ತು ಆಂಧ್ರದ ಗಡಿ ಭಾಗ ಹಾಗೂ ಮಹಾರಾಷ್ಟ್ರದ ಗಡ್ಚಿರೋಲಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಕ್ಸಲೀಯರ ಉಪಟಳ ಇನ್ನೂ ಇದೆ. ಈ ಭಾಗದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಇಡೀ ನಕ್ಸಲ್ ಸಮಸ್ಯೆಯನ್ನೇ ನಿರ್ಮೂಲನೆ ಮಾಡಬೇಕು. ಯಾವುದೇ ನಾಗರಿಕ ಸಮಾಜಕ್ಕೆ ರಕ್ತಸಿಕ್ತ ಹೋರಾಟ ಅಗತ್ಯವಲ್ಲ ಎಂಬು ದನ್ನು ತೋರಿಸಬೇಕಾಗಿದೆ.