Saturday, 14th December 2024

ನೂತನ ಜಿಲ್ಲಾ ರಚನೆ ರಾಜಕೀಯ ಮುಕ್ತವಾಗಿರಲಿ

ನೂತನ ಜಿಲ್ಲೆಗಳ ರಚನೆ ಅಭಿವೃದ್ಧಿ ದೃಷ್ಟಿಯಿಂದಾಗಿ ಉತ್ತಮ ಕಾರ್ಯ. ಆದರೆ ಈ ಪ್ರಯತ್ನ ಸ್ಥಳೀಯ ನಿವಾಸಿಗಳಲ್ಲಿ
ಭರವಸೆ ಮೂಡಿಸಬೇಕೆ ಹೊರತು, ಧಕ್ಕೆ ಉಂಟುಮಾಡುವಂತಿರಬಾರದು.

ಇದೀಗ ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದಾಗಿ, ನೂತನ ಜಿಲ್ಲಾ ರಚನೆ ಎಂಬುದು ಅಭಿವೃದ್ಧಿ ಗಾಗಿಯೇ ಅಥವಾ ಪ್ರತಿಷ್ಠೆಗಾಗಿಯೇ ಎಂಬ ವಿವಾದವೊಂದು ಸೃಷ್ಟಿಯಾಗಿದೆ. ಬೆಳಗಾವಿ – ತುಮಕೂರುಗಳಂಥ ದೊಡ್ಡ ಜಿಲ್ಲೆಗಳನ್ನು ವಿಭಜಿಸದೆ, ಮೊದಲು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಹೊರಟಿರುವುದು ರಾಜಕೀಯ ಲಾಭಕ್ಕಾಗಿ ಕೈಗೊಂಡಿ ರುವ ಏಕಪಕ್ಷೀಯ ನಿರ್ಧಾರ ಎಂಬುದು ವಿಭಜನೆಯನ್ನು ವಿರೋಧಿಸುತ್ತಿರುವವರ ಆರೋಪ.

ಹೊಸಪೇಟೆಯನ್ನು ಜಿಲ್ಲಾ ಕೇಂದ್ರ ವನ್ನಾಗಿಸಿ ನೂತನ ವಿಜಯನಗರ ಜಿಲ್ಲೆ ರಚಿಸಲು ಮುಂದಾಗಿದೆ. ಆದರೆ ಹಂಪಿ ಮತ್ತು ತುಂಗಾಭದ್ರ ಡ್ಯಾಂ ಇಲ್ಲದ ಬಳ್ಳಾರಿ ಜಿಲ್ಲೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜನರು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ್ದು, ನ.26ರಂದು ಬಳ್ಳಾರಿ ನಗರ ಬಂದ್‌ಗೆ ಕರೆನೀಡಲಾಗಿದೆ. ನೂತನ ಜಿಲ್ಲಾ ರಚನೆಗೆ ಅಭಿವೃದ್ಧಿ ಕಾರಣವಾದರೆ, ರಾಜಕೀಯ ಮೀಸಲಾತಿ, ನೀರುಹಂಚಿಕೆ ಸೇರಿದಂತೆ ಹಲವು ವಿಚಾರಗಳು ವಿರೋಧಕ್ಕೆ ಕಾರಣವಾಗಿವೆ.

ಇತ್ತೀಚೆಗಷ್ಟೇ ಬಳ್ಳಾರಿ ಜಿಲ್ಲೆ ಒಳಗೊಂಡಿದ್ದ ಹರಪನಹಳ್ಳಿಯನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಳಿಸಿ, ನಂತರ ಪುನಃ ಬಳ್ಳಾ ರಿಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಹರಪನಹಳ್ಳಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ನೂತನ ಜಿಲ್ಲೆ ರಚನೆ ಉತ್ತಮ ಬೆಳವಣಿಗೆ. ಆದರೆ ಇರುವ ಅಡೆತಡೆಗಳನ್ನು ನಿವಾರಿಸಿ, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಕರ್ಯ ಒದಗಿಸಬೇಕಿರುವುದು ಅವಶ್ಯ.