Friday, 8th November 2024

ಹೊಸ ವರ್ಷದ ಕೊಡುಗೆ

ದೇಶವಿಂದು ಸಂಭ್ರಮಾಚರಣೆಗಳಿಂದ ದೂರವಾಗಿದೆ. ಆದರೆ ಆರೋಗ್ಯ ಸುರಕ್ಷತೆಗೆ ಸಜ್ಜುಗೊಂಡಿರುವುದು ವರ್ಷಾರಂಭಕ್ಕೆ ದೊರೆಯುತ್ತಿರುವ ಕೊಡುಗೆ.

ಆಗಮಿಸಲಿರುವ ದಿನಗಳು ಆಶಾದಾಯಕವಾಗಿರಲಿದ್ದು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಂತಿಮ ಹಂತ ವನ್ನು ತಲುಪಲಾಗಿದೆ. ಆರೋಗ್ಯ ಕ್ಷೇತ್ರದ ಸದೃಢತೆಗೆ ಭಾರತ ಸಶಕ್ತವಾಗಿ ಸಜ್ಜುಗೊಂಡಿರುವುದೇ ಹೊಸ ವರ್ಷಕ್ಕೆ ದೊರೆಯ ಲಿರುವ ನಿಜವಾದ ಸಂಭ್ರಮ. ಮುಖ್ಯವಾಗಿ ದೇಶಿಯ ಲಸಿಕೆ ವಿತರಣೆಯನ್ನೇ ಬಳಸಲು ನಿರ್ಧರಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗಿದ್ದು, ನಾಳೆಯಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಲಸಿಕೆ ನೀಡುವ ಪೂರ್ವಾಭ್ಯಾಸ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ 2360 ಮಂದಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಇವರು ವಿವಿಧ ಹಂತಗಳಲ್ಲಿ ಲಸಿಕೆ ನೀಡುವ ಕುರಿತು ಮಾರ್ಗದರ್ಶನ ಮಾಡುತ್ತಿದ್ಧಾರೆ.

681604 ಮಂದಿ ವೈದ್ಯಕೀಯ ಅಽಕಾರಿಗಳನ್ನು ಈ ಉದ್ದೇಶಕ್ಕಾಗಿ ಸಜ್ಜುಗೊಳಿಸಲಾಗಿದೆ. ಲಸಿಕೆ ನೀಡುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿದೆ. ಮತ್ತೊಂದೆಡೆ ಶಾಲೆಗಳ ಆರಂಭದ ಬಗ್ಗೆ ಇದ್ದ ಗೊಂದಲಗಳು ಬಗೆಹರಿದಿವೆ. ಶಾಲೆ ಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು ಎಂದು ಸರಕಾರ ಸ್ಪಷ್ಟಪಡಿಸಿದೆ. ‘ಕರೋನಾ ಓಡಿಸೋಣ – ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’ ಎಂಬ ಆಶಯದೊಂದಿಗೆ ಬಹುದಿನಗಳ ನಂತರ ಶಾಲೆಗಳು ಪುನರಾರಂಭಕ್ಕೆ ಸಜ್ಜುಗೊಳ್ಳುತ್ತಿರುವುದು ಮತ್ತೊಂದು ಆಶಾದಾಯಕ ಬೆಳವಣಿಗೆ.

ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜುಗೊಳ್ಳುತ್ತಿರುವ ಈ ದಿನಗಳಲ್ಲಿ ಕರೋನಾ ನಿರ್ಮೂಲನೆ ಜತೆಗೆ ಸ್ವಚ್ಛತೆಯ ಅರಿವು – ಜವಾಬ್ದಾರಿಯೂ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ಎಲ್ಲ ಕಾರಣಗಳಿಗಾಗಿ 2021ರ ಹೊಸ ವರ್ಷಾಚರಣೆ
ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.