ಪಿಎಸ್‌ಐ ನೇಮಕ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಬಿಟ್ಟು, ಆ ಕುರಿತು ಕೆಲವು ದಾಖಲೆಗಳನ್ನು ಬಹಿರಂಗಪಡಿಸಿದ
ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದಕ್ಕೆ ಇಡೀ ಕಾಂಗ್ರೆಸ್ ನಾಯಕರೇ ಪ್ರಿಯಾಂಕ್ ಖರ್ಗೆ ಪರ ಮಾತನಾಡುತ್ತಿದ್ದು, ಪೊಲೀಸರ ಮತ್ತು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ರಮವೆಸಗಿದ ಕುರಿತು ಯಾರ ಬಳಿಯೇ ಇದ್ದರೂ ಅವುಗಳನ್ನು ವಿಚಾರಣಾಧಿಕಾರಿಗಳ ಮುಂದೆ ಸಾಬೀತುಪಡಿಸುವುದು ಜವಾಬ್ದಾರಿಯುತ ನಾಗರಿಕನ ಲಕ್ಷಣವಲ್ಲವೇ? ಇದರಲ್ಲಿ ಆರೋಪ-ಪತ್ಯಾರೋಪಗಳ ಅಗತ್ಯವೇನಿದೆ? ಈ ಪ್ರಕರಣವನ್ನು ರಾಜಕೀಯಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಆರೋಪ ಮಾಡಿದ್ದಾರೆ.
ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡದೇ, ಕೇವಲ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿ ಪ್ರಚಾರ ಪಡೆದಿದ್ದು ಯಾರು? ಪ್ರಕರಣವನ್ನು ರಾಜಕೀಯಗೊಳಿಸಲು ಮುಂದಾಗಿದ್ದು ಯಾರು ಎಂಬುದನ್ನು ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿ ಕೊಳ್ಳಬೇಕಿದೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳು ಅಥವಾ ಸಂದರ್ಭಗಳ ಬಗ್ಗೆ ತಿಳಿವಳಿಕೆಯಿರುವಂತೆ ತೋರುತ್ತಿರುವ ವ್ಯಕ್ತಿಯು ಅಗತ್ಯವಿದ್ದಲ್ಲಿ ವಿಚಾರಣೆಗೆ ಹಾಜರಾ ಗಬೇಕು ಎಂದು ಸಿಆರ್‌ಪಿಸಿ ಸೆಕ್ಷನ್ ೧೬೦ ನಿರ್ದೇಶಿಸುತ್ತದೆ.
ಈ ವಿಷಯದಲ್ಲಿ ಶಾಸಕ ಅಥವಾ ಸಂಸದರು ವಿನಾಯಿತಿ ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಿದ್ದಲ್ಲಿ, ಪೊಲೀಸರ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದ್ದಲ್ಲಿ ತಪ್ಪೇನಿದೆ? ಆದಕಾರಣ ಸಮಾಜದ ಹಿತದೃಷ್ಟಿಯಿಂದ ಖರ್ಗೆ ಅವರು ತಮಗೆ ಗೊತ್ತಿರುವ ಎಲ್ಲ ವಿಚಾರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿಯೋ ಇಲ್ಲವೇ ಅವರ ಲ್ಲಿಗೇ ಹೋಗಿ ತಮಗೆ ತಿಳಿವಳಿಕೆ ಇಲ್ಲವೆಂದೋ ಹೇಳಿಕೆ ಕೊಡುವುದರ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನಂತೆ ನಡೆದು ಕೊಳ್ಳಬೇಕು. ಇನ್ನು ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಿಗಿ ಬಂಧನವಾಗುವವರೆಗೂ ಪ್ರಕರಣದ ಸತ್ಯಾಸತ್ಯತೆ ಹೊರಬೀಳುವು ದಿಲ್ಲ.
ಪ್ರಕರಣ ಬಯಲಿಗೆ ಬಂದು ಇಷ್ಟು ದಿನಗಳು ಕಳೆದರೂ ಈವರೆಗೂ ದಿವ್ಯಾ ಹಾಗರಗಿಯನ್ನು ಪೊಲೀಸರು ಬಂಧಿಸಲು ಸಾಧ್ಯ ವಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಇದು ಪೊಲೀಸರ ವೈಫಲ್ಯವೋ ಅಥವಾ ಆಯಕಟ್ಟಿನ ಸ್ಥಾನದಲ್ಲಿರುವವರೇ ದಿವ್ಯಾಗೆ ರಕ್ಷಣೆ ಕೊಡುತ್ತಿದ್ದಾರೋ ಎಂಬುದು ನಿಗೂಢವಾಗಿದೆ. ದಕ್ಷ, ಪ್ರಾಮಾಣಿಕ, ಸಮರ್ಥತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸರು ಕೂಡಲೇ ಪ್ರಕರಣದ ಕಿಂಗ್‌ಪಿನ್ ದಿವ್ಯಾ ಹಾಗರಿಯನ್ನು ಬಂಧಿಸಿ, ತನಿಖೆ ನಡೆಸಬೇಕಿದೆ.