ಎನ್‌ಇಪಿ ರದ್ದುಗೊಳಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಆಡಳಿತದಲ್ಲಿರುವವರು ಯಾರೂ ಕೇಳಿಸಿಕೊಳ್ಳುವ ತಾಳ್ಮೆಯಲ್ಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯು ದೂರದೃಷ್ಟಿಯಿಂದ ಕೂಡಿದ ಒಂದು ತಾತ್ವಿಕ ದಾಖಲೆಯಾಗಿದೆ. ಬದಲಾದ ಕಾಲಕ್ಕೆ ತಕ್ಕ ಒಂದು ಶಿಕ್ಷಣ ನೀತಿಯ ಅಗತ್ಯವಿರುವುದನ್ನು ಕಂಡ ಕೇಂದ್ರ ಸರಕಾರ, ಸಾಕಷ್ಟು ತಜ್ಞರ ಸಲಹೆ, ಸಾರ್ವಜನಿಕರಿಗೆ ಅದರ ಕರಡು ಪ್ರಕಟಣೆ, ಸಲಹೆ ಸೂಚನೆಗಳ ಸೇರ್ಪಡೆ ಇತ್ಯಾದಿಗಳೊಂದಿಗೆ ೨೦೨೦ರಲ್ಲಿ ಹೊಸ ನೀತಿಯನ್ನು ಅಂತಿಮಗೊಳಿಸಿದೆ.
ಈ ನೀತಿಯು ೨೦೪೦ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಅಗತ್ಯ ಕಲಿಕೆ, ವಿಮರ್ಶಾ ತ್ಮಕ ಚಿಂತನೆ ಮತ್ತು ಹೆಚ್ಚು ಸಮಗ್ರ ಅನುಭವ, ಚರ್ಚಾ-ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಕುರಿತು ಚರ್ಚಿಸಿದೆ. ಮಕ್ಕಳ ಅರಿವಿನ ಬೆಳವಣಿಗೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಗೊಳಿ ಸುವ ಪ್ರಯತ್ನದಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ರಚನೆಯನ್ನು ೧೦ + ೨ ವ್ಯವಸ್ಥೆಯಿಂದ ೫ + ೩ + ೩ + ೪ ವ್ಯವಸ್ಥೆಯ ವಿನ್ಯಾಸಕ್ಕೆ ಪರಿಷ್ಕರಿಸುವ ಬಗ್ಗೆಯೂ ಇದು ಹೇಳುತ್ತದೆ.
ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತರುವ ಉದ್ದೇಶವಿದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವನ್ನು ಉನ್ನತ ಶಿಕ್ಷಣಕ್ಕೆ, ವೃತ್ತಿಪರ ತರಬೇತಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಜೋಡಿಸುವಂತೆ ರೂಪಿಸುವ ಚಿಂತನೆ ಇದರಲ್ಲಿದೆ. ಇದು ಹೊಸ ಕಾಲದ ಸವಾಲುಗಳಿಗೆ ಉತ್ತರಿಸುವಂತೆ ಈ ಕಾಲದ ವಿದ್ಯಾರ್ಥಿಯನ್ನು ರೂಪಿಸಲು ಬಯಸುತ್ತದೆ. ಇಷ್ಟು ಯೋಚಿಸಿ ರೂಪಿಸಿರುವ ಒಂದು ನೀತಿಯನ್ನು, ರಾಜಕೀಯ ಉದ್ದೇಶಕ್ಕಾಗಿ ಕುಲಗೆಡಿಸಲು ಮುಂದಾಗಬಾರದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡಲು ಹೋಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಮಕ್ಕಳನ್ನು ಜಾಗತಿಕ ಸ್ಪರ್ಧಾತ್ಮಕತೆಗೆ ಪ್ರೇರೇಪಿಸುತ್ತದೆ. ನಮ್ಮ ಮಕ್ಕಳ ಭವಿಷ್ಯದೆಡೆಗೆ ಇದು ಉತ್ತಮ ಹೆಜ್ಜೆಯಾಗಿದೆ. ಓಬೇರಾಯನ ಕಾಲದ ಶಿಕ್ಷಣ ಪದ್ಧತಿ ಬದಲಾಗಲೇಬೇಕಿತ್ತು, ಎನ್‌ಇಪಿ ಮೂಲಕ ಅದು ಆಗಿದೆ. ಮಕ್ಕಳ ಶಿಕ್ಷಣದ ಭವಿಷ್ಯದ ಜತೆ ರಾಜಕೀಯ ಪಕ್ಷಗಳು ಚೆಟ ಆಡಬಾರದು.